ಕರಾವಳಿ ಉತ್ಸವಕ್ಕೆ ಬರುವ ಗಣ್ಯರಿಗಾಗಿ ಜಿಲ್ಲಾಡಳಿತ ವಿಐಪಿ ಪಾಸುಗಳನ್ನು ನೀಡಿದ್ದು, ಗಣ್ಯರ ಸಾಲಿನಲ್ಲಿ ಕೂರಲು ಅನೇಕರು ನಕಲಿ ಪಾಸುಗಳ ಮೊರೆ ಹೋಗಿದ್ದಾರೆ. ಗಣ್ಯರಿಗೆ ನೀಡಿದ ಪಾಸುಗಳನ್ನು ಕಲರ್ ಜರಾಕ್ಸ್ ಮಾಡಿಸಿ ಮುಂದಿನ ಸಾಲಿನ ಪ್ರವೇಶ ಪಡೆಯುತ್ತಿದ್ದಾರೆ!
ಕರಾವಳಿ ಉತ್ಸವ ದಿನದಿಂದ ದಿನಕ್ಕೆ ರಂಗುಪಡೆಯುತ್ತಿದೆ. ಸ್ಥಳೀಯ ಕಲಾವಿದರ ಜೊತೆ ರಾಷ್ಟçಮಟ್ಟದ ಕಲಾವಿದರು ಆಗಮಿಸಿ ಗಾಯನ ಪ್ರಸ್ತುತಪಡಿಸುತ್ತಿದ್ದಾರೆ. ಕಾರ್ಯಕ್ರಮ ವೀಕ್ಷಣೆಗೆ 12 ಸಾವಿರ ಆಸನಗಳ ವ್ಯವಸ್ಥೆ ಮಾಡಿದ್ದು, ಅದು ಸಾಲುತ್ತಿಲ್ಲ. ಅನೇಕರು ದೂರದಿಂದಲೇ ನಿಂತು ಕಾರ್ಯಕ್ರಮ ನೋಡುತ್ತಿದ್ದು ವೇದಿಕೆ ಸಮೀಪ ತೆರಳಲು ಹಲವರು ಅಡ್ಡದಾರಿ ಹಿಡಿದಿದ್ದಾರೆ.
ಗಣ್ಯರು ಹಾಗೂ ಅತಿ ಗಣ್ಯರಿಗಾಗಿ ಜಿಲ್ಲಾಡಳಿತ ಅನೇಕ ಆಸನಗಳನ್ನು ಮೀಸಲಿರಿಸಿದೆ. ಆ ಆಸನಗಳಲ್ಲಿ ಪಕ್ಷವೊಂದರ ಕಾರ್ಯಕರ್ತರು ಆಸೀನರಾಗಿದ್ದಾರೆ. ಇದರೊಂದಿಗೆ ಹೂ-ಹಣ್ಣು, ತರಕಾರಿ ವ್ಯಾಪಾರಿಗಳ ಬಳಿಯೂ ಗಣ್ಯರ ಪಾಸುಗಳಿದ್ದು, ವಿತರಣೆ ಆದ ಪಾಸುಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಪಾಸುಗಳು ಉತ್ಸವದ ವೇದಿಕೆ ಕಡೆ ಬರುತ್ತಿದೆ. ಪಾಸುಗಳನ್ನು ಕಲರ್ ಜರಾಕ್ಸ್ ಮಾಡಿ ಗಣ್ಯರ ಪ್ರವೇಶ ದ್ವಾರದ ಬಳಿ ಬರುವವರ ಸಂಖ್ಯೆ ಹೆಚ್ಚಾಗಿದೆ.
ರಾತ್ರಿ ವೇಳೆ ಏಕಾಏಕಿ ಜನ ನುಗ್ಗುವುದರಿಂದ ಪಾಸುಗಳನ್ನು ಸೂಕ್ಷö್ಮವಾಗಿ ಪರಿಶೀಲಿಸಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ. ಅದಾಗಿಯೂ, ಪೊಲೀಸರು ನಕಲಿ ಪಾಸುಹೊಂದಿದವರನ್ನು ಹೊರಗೆ ಕಳುಹಿಸುವ ಪ್ರಯತ್ನ ಮಾಡಿದರೆ ವೇದಿಕೆಯ ಮುಂದೆಯೇ ವಾಗ್ವಾದ ಶುರುವಾಗುತ್ತದೆ. ಹೀಗಾಗಿ ನಕಲಿ ಪಾಸ್ ಹಾವಳಿ ತಡೆಯಲು ಜಿಲ್ಲಾಡಳಿತ ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲು ಸಿದ್ಧತೆ ನಡೆಸಿದೆ.