ಕಾರವಾರ ಕಡಲತೀರದಲ್ಲಿ ಏಳು ದಿನಗಳ ಕಾಲ ಅದ್ಧೂರಿ ಕರಾವಳಿ ಉತ್ಸವ ನಡೆದಿದ್ದು, ಲಕ್ಷಾಂತರ ಜನ ಗಾನಸುಧೆಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಏಳು ವರ್ಷಗಳ ನಂತರ ಜಿಲ್ಲಾಡಳಿತ ಕರಾವಳಿ ಉತ್ಸವ ಆಯೋಜಿಸಿದ್ದು, ರಾಜ್ಯ, ರಾಷ್ಟ ಮತ್ತು ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ.
ಡಿಸೆಂಬರ್ 22ರಿಂದ ಶುರುವಾದ ಕರಾವಳಿ ಉತ್ಸವದಲ್ಲಿ ರಾಷ್ಟ ಮತ್ತು ರಾಜ್ಯದ ಪ್ರಖ್ಯಾತ ಗಾಯಕರಾದ ಶಂಕರ್ ಮಹಾದೇವನ್, ಸೋನು ನಿಗಮ್, ರಫ್ತಾರ್, ದಲೇರ್ ಮೆಹಂದಿ. ಮೊಹಮದ್ ದಾನೀಷ್, ರಾಜೇಶ್ ಕೃಷ್ಣನ್, ಗುರುಕಿರಣ್ ಅವರು ತಮ್ಮ ಗಾಯನ ಪ್ರಸ್ತುಪಡಿಸಿದರು. ಉತ್ಸವದ ಅಂಗವಾಗಿ ನಡೆದ ಕವಿಗೋಷ್ಠಿ, ಗೋಡೆ ಮೇಲೆ ಚಿತ್ರ ಬಿಡಿಸುವ ಸ್ಪರ್ಧೆ, ಛಾಯಾಚಿತ್ರ ಮತ್ತು ರೀಲ್ಸ್ ಪ್ರದರ್ಶನ ಹಾಗೂ ಸ್ಪರ್ಧೆ, ರಂಗೋಲಿ ಮತ್ತು ಅಡುಗೆ ಸ್ಪರ್ಧೆ, ಗಾಳಿಪಟ ಉತ್ಸವ, ಮರಳು ಕಲೆ, ಕರಾವಳಿ ರನ್ ಮ್ಯಾರಾಥಾನ್, ಶ್ವಾನ ಪ್ರದರ್ಶನ, ಹಗ್ಗ ಜಗ್ಗಾಟ, ವಾಲಿಬಾಲ್, ಕಬಡ್ಡಿ, ಮೀನುಗಾರರ ದೋಣಿ ಸ್ಪರ್ಧೆಗಳು ಅನೇಕರನ್ನು ಆಕರ್ಷಿಸಿದವು. ಸಮಾರೋಪದ ಅಂತಿಮದಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.
ಪ್ರವಾಸೋದ್ಯಮಕ್ಕೆ ಹೊಸ ನೀತಿ!
ಸಮಾರೋಪ ಸಮಾರಂಭಕ್ಕೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಆಗಮಿಸಿದ್ದು, `ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ಮಾಡುವೆ’ ಎಂದು ಅವರು ಘೋಷಿಸಿದರು. `ಕರಾವಳಿ ಪ್ರದೇಶಗಳ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿ ರಚಿಸುವ ಕುರಿತಂತೆ ಜನವರಿ 10 ರಂದು 3 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮಂಗಳೂರಿನಲ್ಲಿ ಸಭೆ ನಡೆಸಲಾಗುತ್ತದೆ. `ಪಶ್ಚಿಮ ಘಟ್ಟಕ್ಕೆ ಮತ್ತು ಮಲೆನಾಡಿಗೆ ಪ್ರತ್ಯೇಕವಾದ ಪ್ರವಾಸಿ ನೀತಿಯನ್ನು ಮಾಡಿ, ಹೊರಗಡೆಯಿಂದ ಉದ್ದಿಮೆದಾರರು ಬಂದು ಇಲ್ಲಿಯೇ ಬಂಡವಾಳ ಹೂಡವ ರೀತಿ ಮಾಡಲಾಗುತ್ತದೆ. ಇಲ್ಲಿನ ಯುವಕರು ಬೆಂಗಳೂರು, ಮುಂಬೈ, ಸೌದಿ, ಗೋವಾ ಹೊರ ರಾಜ್ಯ, ಜಿಲ್ಲೆಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ ಮನೆ ಬಾಗಲಿಗೆ ಉದ್ಯೋಗವನ್ನು ಸೃಷ್ಠಿಮಾಡಸಬೇಕು ಎಂಬ ಕನಸಿದೆ’ ಎಂದವರು ವಿವರಿಸಿದರು.
`ಸಮುದ್ರ ಎಂದರೇ ಒಂದು ದೊಡ್ಡ ಶಕ್ತಿ, ಮೀನುಗಾರಿಗೆ ಇಲ್ಲಿನ ಬದುಕಿಗೆ ದೊಡ್ಡ ಆಧಾರ, ಇಲ್ಲಿ ಪ್ರವಾಸಿಗರ ಸ್ವರ್ಗವನ್ನು ಕಾಣಬಹುದು. ಇಲ್ಲಿನ ಜನ ಸಾಮಾನ್ಯರ ಸಂತೋಷದ ದೃಷ್ಠಿಯಿಂದ, ಜಿಲ್ಲೆಯ ಕಲಾವಿದರಿಗೆ, ಇಲ್ಲಿನ ಸಂಪ್ರದಾಯ, ಆಚಾರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕಾಗಿ ಕರಾವಳಿ ಉತ್ಸವದಂತಹ ದೊಡ್ಡ ಕಾರ್ಯಕ್ರಮ ಮಾಡಿ ಸಚಿವರು ಇಡೀ ಸರ್ಕಾರಕ್ಕೆ ಗೌರವವನ್ನು ತಂದಿದ್ದಾರೆ’ ಎಂದರು. `ಸಮುದ್ರ ಅಂದರೆ ಸಂಪತ್ತು ಮತ್ತು ಜ್ಞಾನದ ಬಲ, ಬದುಕಿಗೆ ಒಂದು ಆದರ್ಶವನ್ನು ಇಟ್ಟುಕೊಳ್ಳಬೇಕು. ಸಾಧನೆಗೆ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಇಂತಹ ಕಾರ್ಯಕ್ರಮವು ಸಾವಿರಾರು ಯುವಕರ ತಮ್ಮಲ್ಲಿ ಅಡಗಿರುವ ಚಿತ್ರಕಲೆ, ಕ್ರೀಡೆ, ಜನಪದ ಲೋಕ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ, ರಾಷ್ಟçಕ್ಕೆ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಇಂತಹ ವೇದಿಕೆಗಳು ದಾರಿಯಾಗಲಿವೆ’ ಎಂದರು.
`ಅನಾರೋಗ್ಯದಿoದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಗೋವಾ, ಮಂಗಳೂರು, ಉಡುಪಿ ಜಿಲ್ಲೆಗಳ ಮೊರೆ ಹೋಗಬೇಕು ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯನ್ನು ಮಾಡಬೇಕು ಎಂಬ ಸತೀಶ್ ಸೈಲ್ ಅವರು ಬೇಡಿಕೆಗೆ ನಾನು ಕೂಡ ಬೆಂಬಲ ನೀಡುತ್ತೇನೆ’ ಎಂದರು.