ಕದ್ದು ಮುಚ್ಚಿ ಸರಾಯಿ ಕುಡಿಯುತ್ತಿದ್ದ ರಮೇಶ ಮಿರಾಶಿ ಅವರು ರಾತ್ರಿ ವೇಳೆ ಸರಾಯಿ ಎಂದು ತಿಳಿದು ವಿಷ ಕುಡಿದಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಜೊಯಿಡಾದ ರಾಮನಗರದ ಬಾಳೆಕೃಷ್ಣಗಲ್ಲಿಯಲ್ಲಿ ರಮೇಶ ನಾರಾಯಣ ಮಿರಾಶಿ (37) ಅವರು ವಾಸವಾಗಿದ್ದರು. ಪೆಂಟಿAಗ್ ಕೆಲಸ ಮಾಡಿ ಅವರು ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೇ ಅವರು ವ್ಯಸನದ ಹಾದಿ ಹಿಡಿದಿದ್ದರು. ಆಗಾಗ ಸರಾಯಿ ಅಂಗಡಿಗೆ ಹೋಗಿ ಅವರು ಕುಡಿದು ಬರುತ್ತಿದ್ದರು. ರಾತ್ರಿ ಮನೆಗೆ ಬರುವ ಮುನ್ನ ಸರಾಯಿ ಸೇವಿಸುತ್ತಿದ್ದು, ಅದಾದ ನಂತರ ಯಾರ ಜೊತೆಯೂ ಮಾತನಾಡದೇ ಮಲಗುತ್ತಿದ್ದರು.
ಡಿಸೆಂಬರ್ 7ರಂದು ರಾತ್ರಿ ಅವರು ಮನೆಯಿಂದ ಹೊರ ಹೋಗಿ ಸರಾಯಿ ಕುಡಿದಿದ್ದರು. ಈ ದಿನ ಅವರು ಸರಾಯಿ ಬಾಟಲಿಯನ್ನು ಪಾರ್ಸಲ್ ಮಾಡಿಕೊಂಡು ಮನೆಗೆ ತಂದಿದ್ದರು. ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶಕ್ಕೆ ಮನೆಯ ಕತ್ತಲೆ ಕೋಣೆಯಲ್ಲಿ ಅದನ್ನು ಅಡಗಿಸಿಟ್ಟಿದ್ದರು. ರಾತ್ರಿ 12.15ರ ವೇಳೆಗೆ ರಮೇಶ ಮಿರಾಶಿ ಅವರಿಗೆ ಮತ್ತೆ ಸರಾಯಿ ಕುಡಿಯುವ ಬಯಕೆಯಾಯಿತು.
ಎಲ್ಲರೂ ಮಲಗಿರುವ ಸಮಯ ನೋಡಿ ಅವರು ಕತ್ತಲೆ ಕೋಣೆ ಪ್ರವೇಶಿಸಿದರು. ಅವರು ಸರಾಯಿ ಇರಿಸಿದ್ದ ಜಾಗದಲ್ಲಿ ಕ್ರಿಮಿನಾಶಕದ ಬಾಟಲಿಯೂ ಇದ್ದು, ಅವಸರದಲ್ಲಿದ್ದ ರಮೇಶ ಮಿರಾಶಿ ಅವರು ಸರಾಯಿ ಎಂದು ತಿಳಿದು ಕ್ರಿಮಿನಾಶಕ ಕುಡಿದರು. ಅಸ್ವಸ್ಥಗೊಂಡು ಬಿದ್ದ ಅವರನ್ನು ಕುಟುಂಬದವರು ಬೆಳಗಾವಿಗೆ ಕರೆದೊಯ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನ ಆಗಲಿಲ್ಲ. ಹೊಲಕ್ಕೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ದೇಹ ಸೇರಿದ ಪರಿಣಾಮ ರಮೇಶ ಮಿರಾಶಿ ಅವರು ಕೊನೆಯುಸಿರೆಳೆದರು. ರಮೇಶ ಅವರ ಪತ್ನಿ ಸುಮನ ಮಿರಾಶಿ ಅವರು ಈ ಬಗ್ಗೆ ರಾಮನಗರ ಪೊಲೀಸರಿಗೆ ವಿವರಿಸಿದರು.
`ಕುಡಿತ ಒಳ್ಳೆಯದಲ್ಲ’