ಕಾರವಾರದಲ್ಲಿರುವ ಕದಂಬ ನೌಕಾನೆಲೆಗೆ ಗುರುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿದ್ದಾರೆ. ನೌಕಾನೆಲೆ ಅಧಿಕಾರಿಗಳು ಬಣ್ಣ ಬಣ್ಣದ ಸಿಡಿಮದ್ದುಗಳನ್ನು ಸಿಡಿಸಿ ಅವರನ್ನು ಸ್ವಾಗತಿಸಿದ್ದಾರೆ.
Advertisement. Scroll to continue reading.
1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಡಿಸೆಂಬರ್ 4ರಂದು ಕರಾಚಿಯ ಬಂದರಿನ ಮೇಲೆ ಭಾರತ ದಾಳಿ ನಡೆಸಿ ವಿಜಯ ಸಾಧಿಸಿದ ನೆನಪಿಗೆ ಪ್ರತಿ ವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾದಿನ ಆಚರಿಸಲಾಗುತ್ತಿದೆ. ಭಾರತೀಯ ನೌಕಾ ದಿನಾಚರಣೆಯ ಪ್ರಯುಕ್ತ ಕಾರವಾರದ ಐಎನ್‌ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ನೌಕಾ ಸಿಬ್ಬಂದಿ ವಾದ್ಯ ಪರಿಕರಗಳಲ್ಲಿ ದೇಶಭಕ್ತಿ ಗೀತೆಗಳನ್ನು ನುಡಿಸಿದರು. ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ನಂತರ ನೌಕಾಪಡೆಯ ಧ್ವಜದ ಅವರೋಹಣ ನಡೆಯಿತು. ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ನೌಕೆಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಅದು ಗಮನಸೆಳೆಯಿತು. ನೌಕೆಗಳಿಂದ ಸಿಡಿಮದ್ದುಗಳನ್ನು ಸಿಡಿಸಲಾಯಿತು.
ನೌಕಾಪಡೆಯ ಸಿಬ್ಬಂದಿ, ನೌಕಾ ಅಗ್ನಿವೀರರು, ನೌಕಾನೆಲೆ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕರ್ನಾಟಕ ನೌಕಾ ನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಓಟ್ ಆಫಿಸರ್ ರಿಯರ್ ಅಡ್ಮಿರಲ್ ವಿಕ್ರಂ ಮೆನನ್, ಜಿಲ್ಲಾಧಿಕಾರಿ ಕೆ ಲಕ್ಷ್ಮಿ ಪ್ರಿಯಾ, ಜಿ ಪಂ ಸಿಇಓ ದಿಲೀಷ್ ಶಶಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ದೀಪನ್ ಎಂ ಎನ್, ಉಪಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು ಈ ಕಾರ್ಯಕ್ರಮದಲ್ಲಿದ್ದರು.