ಜಿಪಿಎಸ್ ಹೊತ್ತು ಕಾರವಾರ ಕಡಲತೀರದ ಕಡೆ ಬಂದಿದ್ದ ಹಕ್ಕಿ ಗಾಯದ ನೋವು ಸಹಿಸಲಾಗದೇ ಸಾವನಪ್ಪಿದೆ. ಆ ಹಕ್ಕಿಯ ಜೀವ ಉಳಿಸುವ ಕಸರತ್ತು ನಡೆಯಿತಾದರೂ ಅದು ಪ್ರಯೋಜನಕ್ಕೆ ಬಂದಿಲ್ಲ.
ಚಳಿಗಾಲದ ಅವಧಿಯಲ್ಲಿ ಭಾರತದ ಕರಾವಳಿ ಪ್ರದೇಶಕ್ಕೆ ಸೀಗಲ್ ಹಕ್ಕಿ ವಲಸೆ ಬರುತ್ತದೆ. ಮೊನ್ನೆ ಕಾರವಾರಕ್ಕೆ ಬಂದ ಹಕ್ಕಿಯ ಬೆನ್ನಿನ ಮೇಲೆ ಜಿಪಿಎಸ್ ಪತ್ತೆಯಾಗಿದ್ದು, ಜನ ಆತಂಕಕ್ಕೆ ಒಳಗಾಗಿದ್ದರು. ನಂತರ ಅಧ್ಯಯನಕ್ಕಾಗಿ ಅದಕ್ಕೆ ಜಿಪಿಎಸ್ ಅಳವಡಿಸಿದ್ದು ಗೊತ್ತಾಗಿತ್ತು. ಗಾಯಗೊಂಡ ಆ ಹಕ್ಕಿಯನ್ನು ಹಿಡಿದು ದಾಂಡೇಲಿ ವನ್ಯಜೀವಿ ಪುರ್ನವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡುವ ಪ್ರಯತ್ನ ನಡೆಯಿತು. ಆದರೆ, ಆ ಹಕ್ಕಿ ಚೇತರಿಸಿಕೊಳ್ಳಲಿಲ್ಲ. ಆಹಾರ ಸೇವಿಸಲು ಸಾಧ್ಯವಾಗದೇ ಹಕ್ಕಿ ಕೊನೆಯುಸಿರೆಳೆಯಿತು.
ಮಾರ್ಚ ತಿಂಗಳ ಅವಧಿಯಲ್ಲಿ ಆ ಹಕ್ಕಿಗೆ ಜಿಪಿಎಸ್ ಟ್ರಾಕರ್ ಅಳವಡಿಸಿದ್ದು ಅರಿವಿಗೆ ಬಂದಿದೆ. ಆ ನಂತರ ಸೈಬಿರಿಯಾದತ್ತ ಪ್ರಯಾಣಿಸಿದ್ದ ಸೀಗಲ್ ಹಕ್ಕಿ ಆರ್ಕ್ಟಿಕ್’ನವರೆಗೆ ಸಾಗಿ ನಂತರ ಅಲ್ಲಿ ಸಂತಾನೋತ್ಪತ್ತಿಯಲ್ಲಿ ತೊಡಗಿಸಿಕೊಂಡು ಶ್ರೀಲಂಕಾ ಕಡೆ ಹೊರಟಿತ್ತು. ಈ ನಡುವೆ ಮಾರ್ಗ ಮಧ್ಯೆ ಕಾರವಾರದ ತೀರದಲ್ಲಿ ಹಾರಾಟ ಸ್ಥಗಿತಗೊಳಿಸಿತ್ತು ಎಂದು ಕೊಲಂಬೊದ ಸಂಸ್ಥೆ ಮಾಹಿತಿ ನೀಡಿದೆ.