ಶಿರಸಿಯ ಹೈಟೆಕ್ ಆಸ್ಪತ್ರೆ ವಿಷಯವಾಗಿ ಹೋರಾಟ ಶುರು ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಆ ಹೋರಾಟವನ್ನು ಮತ್ತೆ ಮುಂದುವರೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಕೊಳಕಿನ ಬಗ್ಗೆ ಅವರು ಕಿಡಿಕಾರಿದ್ದಾರೆ.
Advertisement. Scroll to continue reading.
`ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯನ್ನು ನಿರ್ಲಕ್ಷಿಸಿ ಜನರ ಸಾವಿನ ಮೇಲೆ ತನ್ನ ರಾಜ್ಯಭಾರವನ್ನು ಮಾಡುತ್ತಿದೆ’ ಎಂದವರು ದೂರಿದ್ದಾರೆ. `ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ಕಾಮಗಾರಿ ಶೇ 8-ರಷ್ಟು ಪೂರ್ಣವಾಗಿ ವರ್ಷ ಕಳೆದರೂ ವೈದ್ಯಕೀಯ ಉಪಕರಣ, ತಜ್ಞ ವೈದ್ಯರ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ’ ಎಂಬುದನ್ನು ಪುನರುಚ್ಚರಿಸಿದ್ದಾರೆ.
`ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಹಿರಿಯರಾಗಿರುವ ಆರ್ ವಿ ದೇಶಪಾಂಡೆ ಒಳಗೊಂಡು ಕಾಂಗ್ರೆಸ್ ಸರಕಾರ ಶಿರಸಿಯನ್ನು ನಿರ್ಲಕ್ಷಿಸಿದೆ. ಖಂಡಿಸಿ ಡಿಸೆಂಬರ್ 16ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಬೃಹತ್ ಹೋರಾಟ ನಡೆಯಲಿದೆ’ ಎಂದವರು ಘೋಷಿಸಿದರು. `ಇದು ಕೇವಲ ಯಾರ ವಿರುದ್ಧದ ಹೋರಾಟವಲ್ಲ. ಕ್ಷೇತ್ರದ ಜನರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟ’ ಎಂದು ಸ್ಪಷ್ಠಪಡಿಸಿದರು.
`ಜಿಲ್ಲೆಯಲ್ಲಿ ಅಪಘಾತ ಪ್ರಮಾಣ ಹೆಚ್ಚಾಗಿದೆ. ಸಾವು-ನೋವುಗಳು ಹೆಚ್ಚಾಗಿದೆ. ಮಲ್ಟಿ ಸ್ಪೆಷಾಲಿಟಿ ಇಲ್ಲದಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಯ ಉತ್ತಮ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಆ ಕಾರಣಕ್ಕಾಗಿಯೇ ಶಿರಸಿಯಲ್ಲಿ ಅಂದಿನ ಬಿಜೆಪಿ ಸರಕಾರದ ಆಡಳಿತದಲ್ಲಿ 250 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಈಗಿನ ರಾಜ್ಯ ಕಾಂಗ್ರೆಸ್ ಸರಕಾರ ರಾಜಕಾರಣ ಕಾರಣಕಕ್ಕೆ ಆಸ್ಪತ್ರೆಗೆ ಆಸಕ್ತಿವಹಿಸಿಲ್ಲ’ ಎಂದವರು ದೂರಿದರು.