ಉತ್ತರ ಕನ್ನಡ ಜಿಲ್ಲೆಯಲ್ಲಿ 7 ಸಾವಿರಕ್ಕೂ ಅಧಿಕ ಆಟೋ ರಿಕ್ಷಾಗಳಿದ್ದು, ಅನೇಕ ಆಟೋ ಚಾಲಕರಿಗೆ ಸರಿಯಾದ ಬಾಡಿಗೆ ಸಿಗುತ್ತಿಲ್ಲ. ಕೆಲವರು ಎರಡಕ್ಕಿಂತ ಅಧಿಕ ಆಟೋ ಪರವಾನಿಗೆಪಡೆದಿದ್ದು, ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಉತ್ತರಕನ್ನಡ ಜಿಲ್ಲಾ ಆಟೋ ಚಾಲಕ ಹಾಗೂ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಎಸ್ ಗೌಡ ಶಿರಸಿ ಅವರು ಮಾಹಿತಿ ನೀಡಿದ್ದು, `ಜನಸಂಖ್ಯೆಗೆ ಅನುಗುಣವಾಗಿ ಆಟೋ ಸಂಖ್ಯೆಯಿರಬೇಕಿದ್ದು, ಕೆಲ ತಾಲೂಕುಗಳಲ್ಲಿ ಅದನ್ನು ಮೀರಿ ಆಟೋಗಳಿವೆ. ಇದರಿಂದ ಆಟೋ ನಿಲ್ದಾಣದಲ್ಲಿ ಸ್ಥಳಾವಕಾಶ ಕೊರತೆ, ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ’ ಎಂದವರು ವಿವರಿಸಿದ್ದಾರೆ. `ಮುಂದಿನ ಐದು ವರ್ಷದವರೆಗೆ ಆಟೋ ಪರವಾನಿಗೆ ನೀಡುವುದನ್ನು ಸ್ಥಗಿತಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಆಟೋ ರಿಕ್ಷಾಗಳ ಸಂಖ್ಯೆ ಹೆಚ್ಚಳವಾಗಿದ್ದರಿಂದ ಆದ ಸಮಸ್ಯೆ ಬಗ್ಗೆ ಅವರು ವಿವರಿಸಿದ್ದಾರೆ.
`ಆಟೋ ಸಂಚರಿಸುವ ಪರ್ಮಿಟ್ ವ್ಯಾಪ್ತಿಯನ್ನು ಕನಿಷ್ಠ 50 ಕಿಲೋ ಮೀಟರ್‌ವರೆಗೆ ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ. `ಕೆಲವರು ಲಾಭದಾಸೆಗೆ ಬಿದ್ದು ಆಟೋ ಖರೀದಿ ಮಾಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಎರಡು ಪರ್ಮಿಟ್‌ಗಿಂತ ಹೆಚ್ಚು ಹೊಂದಿರುವ ಮಾಲಕರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದವರು ಒತ್ತಾಯಿಸಿದ್ದಾರೆ. `ಹಲವು ಜಿಲ್ಲೆಗಳಲ್ಲಿ ಪರ್ಮಿಟ್ ತಾತ್ಕಾಲಿಕ ನಿಷೇಧ ಜಾರಿಯಲ್ಲಿದೆ. ಅದರಂತೆ, ಉತ್ತರ ಕನ್ನಡದಲ್ಲೂ ಕನಿಷ್ಠ ಐದು ವರ್ಷಗಳ ಕಾಲ ಹೊಸ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ಪರ್ಮಿಟ್ ನೀಡುವಾಗ ನಗರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ನ ಪರವಾನಿಗೆಯನ್ನು ಕಡ್ಡಾಯಗೊಳಿಸಬೇಕು. ಹಳೆಯ ಜಿಲ್ಲಾ ಕೇಂದ್ರಗಳಲ್ಲಿಯೇ ಪರ್ಮಿಟ್ ನೀಡುವ ಪದ್ಧತಿಯನ್ನು ಪುನರುಜ್ಜೀವನಗೊಳಿಸಬೇಕು. ನಗರ ಪ್ರದೇಶಗಳಲ್ಲಿ 7 ಕಿಮೀ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 3ಕಿಮೀ ಮಾತ್ರ ಸಂಚರಿಸುವ ಪರವಾನಿಗೆ ನೀಡಲಾಗಿದ್ದು, ಅದನ್ನು ಕನಿಷ್ಟ 50ಕಿಮೀ ದೂರಕ್ಕೆ ವಿಸ್ತರಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ಪ್ರವಾಸಿ ತಾಣ ಮುರ್ಡೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವುದರಿಂದ ಅಲ್ಲಿ 300ಕ್ಕೂ ಹೆಚ್ಚು ಆಟೋಗಳಿದ್ದರೂ ಕೇವಲ 3ಕಿಮೀ ಸಂಚಾರ ಮಿತಿ ಇದೆ. ಪ್ರಾದೇಶಿಕ ಸಾರಿಗೆ ಕಚೇರಿ 27 ಕಿಮೀ ದೂರದಲ್ಲಿದ್ದು, ಗ್ಯಾಸ್ ತುಂಬಿಸಲು 15ಕಿಮೀ ದೂರದ ಭಟ್ಕಳ ಅಥವಾ 25ಕಿಮೀ ದೂರದ ಹೊನ್ನಾವರಕ್ಕೆ ತೆರಳುವುದು ಅನಿವಾರ್ಯ’ ಎಂದವರು ಹೇಳಿದರು. `ಬೇರೆ ಜಿಲ್ಲೆಯ ನೋಂದಣಿಯ ಆಟೋಗಳಿಗೆ ಸಹ ಇಲ್ಲಿ ಪರ್ಮಿಟ್ ಕೊಡಬಾರದು’ ಎಂದು ಆಗ್ರಹಿಸಿದರು.