ಕಾರವಾರ ಕಾರಾಗೃಹದಲ್ಲಿರುವ ಕೈದಿಗಳಿಗೆ ಮಾದಕ ವಸ್ತು ಸರಬರಾಜು ಆಗದ ಕಾರಣ ಅಲ್ಲಿನವರು ಕಂಗಾಲಾಗಿದ್ದಾರೆ. ಮಾದಕ ವಸ್ತುವಿಗಾಗಿ ಕಾಡಿ-ಬೇಡಿದ ಕೈದಿಗಳು ಕೊನೆಗೆ ತಮ್ಮ ಉಗ್ರ ಸ್ವರೂಪ ಪ್ರದರ್ಶಿಸಿದ್ದಾರೆ. ಗಾಂಜಾ ಕೊಡದ ಕಾರಣ ಜೈಲರ್ ಹಾಗೂ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದಾರೆ.
ಕಾರವಾರ ಕಾರಾಗೃಹಕ್ಕೆ ಈಚೆಗೆ ಪೊಲೀಸರು ಭೇಟಿ ನೀಡಿದ್ದರು. ಆಗ, ಅಲ್ಲಿ ಮಾದಕ ವಸ್ತುಗಳು ಸಿಕ್ಕಿದ್ದವು. ಮೊಬೈಲ್ ಬಳಕೆ ಸಹ ಪತ್ತೆಯಾಗಿತ್ತು. ಈ ಹಿನ್ನಲೆ ರೌಡಿಗಳ ವಿರುದ್ಧ ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿದ್ದರು. ಜೊತೆಗೆ ಕಾರಾಗೃಹದಲ್ಲಿನ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ್ದು, ಮಾದಕ ವಸ್ತುಗಳ ಸರಬರಾಜು ಸಂಪೂರ್ಣವಾಗಿ ನಿಲ್ಲಿಸಿದ್ದರು. ಕಾರಾಗೃಹದ ಒಳಗೆ ಮೊಬೈಲ್ ಬಳಕೆ, ಗಾಂಜಾ ಪೂರೈಕೆ ಸೇರಿ ಅಕ್ರಮ ಚಟುವಟಿಕೆಗಳಿಗೆ ತಡೆ ಒಡ್ಡಿದ್ದರು. ಈ ಹಿನ್ನಲೆ ಅಲ್ಲಿನ ಕೈದಿಗಳು ಸಿಟ್ಟಾಗಿದ್ದರು.
ಶನಿವಾರ ಅಲ್ಲಿರುವ ಕೈದಿಗಳು `ಗಾಂಜಾ ಕೊಡಿ’ ಎಂದು ಕೂಗಾಡಿದರು. ಕಟ್ಟುನಿಟ್ಟಿನ ಕ್ರಮದ ಹಿನ್ನಲೆ ಅವರಿಗೆ ಮಾದಕ ವಸ್ತು ಸಿಗಲಿಲ್ಲ. ಹೀಗಾಗಿ ಕೈದಿಗಳು ಜೈಲರ್ ಮೇಲೆ ಆಕ್ರಮಣ ನಡೆಸಿದರು. ತಡೆಯಲು ಬಂದ ಭದ್ರತಾ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿದರು. ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿರುವ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಎಂಬಾತರು ತಮ್ಮ ಉಗ್ರ ಸ್ವರೂಪ ಪ್ರದರ್ಶಿಸಿದ್ದು, ಜೈಲರ್ ಕಲ್ಲಪ್ಪ ಗಸ್ತಿ ಹಾಗೂ ಮೂವರು ಸಿಬ್ಬಂದಿ ಮೇಲೆ ದಾಳಿ ಮಾಡಿದರು. ಸರ್ಕಾರಿ ಸಿಬ್ಬಂದಿಯ ಬಟ್ಟೆ ಹರಿದು ಅವರಿಗೆ ಗಾಯ ಮಾಡಿದರು.
ಕಾರಾಗೃಹದಲ್ಲಿ ಗಲಾಟೆ ಮಾಡಿದ ಆ ಇಬ್ಬರ ವಿರುದ್ಧ 12ಕ್ಕೂ ಅಧಿಕ ಪ್ರಕರಣಗಳಿವೆ. ಅವರು ಮಂಗಳೂರು ಮೂಲದವರಾಗಿದ್ದು, ಈಚೆಗೆ ಭದ್ರತಾ ಕಾರಣದಿಂದ ಅವರಿಬ್ಬರನ್ನು ಕಾರವಾರ ಜೈಲಿಗೆ ವರ್ಗಾಯಿಸಲಾಗಿತ್ತು. ಇಲ್ಲಿಯೂ ಅವರಿಬ್ಬರು ಹೊಡೆದಾಟ ನಡೆಸಿ ಮತ್ತೊಂದು ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಗಾಯಗೊಂಡ ಸಿಬ್ಬಂದಿಗೆ ಪೊಲೀಸರು ರಕ್ಷಣೆ ಒದಗಿಸಿದ್ದಾರೆ. ಜೊತೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದಾರೆ.