ಅಭಿವೃದ್ಧಿಗಾಗಿ ಆಗ್ರಹಿಸಿ 65ಕಿಮೀ ದೂರದ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ಹೋರಾಟವನ್ನು ಶಾಸಕರ ಪತ್ರವೊಂದು ಹತ್ತಿಕ್ಕಿದೆ.. 1.5ಕಿಮೀ ಸಂಚಾರ ನಡೆಸುವುದರೊಳಗೆ ಆ ಪತ್ರ ಬಂದಿದ್ದು, ಅಧಿಕಾರಿಗಳು ಸಹ ದೌಡಾಯಿಸಿ ಪಾದಯಾತ್ರೆಯನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ.
Advertisement. Scroll to continue reading.
ಜೊಯಿಡಾದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದವರು ಪಾದಯಾತ್ರೆಗೆ ಕರೆ ನೀಡಿದ್ದರು. ಆ ಪಾದಯತ್ರೆ ಜೊಯಿಡಾದಿಂದ ಶುರುವಾಗಿ 1.5ಕಿಮೀ ಮುಂದುವರೆದಿತ್ತು. ಆಗ, ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ಅವರು ಪತ್ರವೊಂದನ್ನು ರವಾನಿಸಿದರು. ಪಾದಯಾತ್ರೆಯನ್ನು ಮೊಟಕುಗೊಳಿಸಿ ಎಂದು ಅವರು ಮನವಿ ಮಾಡಿದರು. ವಿವಿಧ ಹಂತದ ಅಧಿಕಾರಿಗಳು ಸಹ ಆಗಮಿಸಿ ಪಾದಯಾತ್ರೆಯನ್ನು ಅಲ್ಲಿಗೆ ತಡೆದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಾತಿಗೆ ಬೆಲೆ ಕೊಟ್ಟು ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಸದ್ಯದ ಮಟ್ಟಿಗೆ ಹಿಂಪಡೆದರು.
ರೈತರು, ಕೂಲಿ ಕಾರ್ಮಿಕರ ಜೊತೆ ಕರ್ನಾಟಕ ಪ್ರಾಂತ ರೈತ ಸಂಘದವರು ಈ ನಡಿಗೆಯಲ್ಲಿ ಭಾಗವಹಿಸಿ, ಭಾಷಣ ಮಾಡಿದರು. ನಂತರ ವಿವಿಧ ಬೇಡಿಕೆಗಳ ಪಟ್ಟಿಯನ್ನು ಪ್ರತಿಭಟನಾಕಾರರು ಸರ್ಕಾರಕ್ಕೆ ಸಲ್ಲಿಸಿದರು. ಬೇಡಿಕೆಗಳ ಈಡೇರಿಕೆಗಾಗಿ ಸಭೆ ನಡೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದು, ಇದಕ್ಕೆ ದಿನಾಂಕ ನಿಗದಿ ಮಾಡುವಂತೆ ಪಟ್ಟುಹಿಡಿದರು. ಡಿಸೆಂಬರ್ 20ರಂದು ಸಭೆ ನಡೆಸುವುದಾಗಿ ಅಧಿಕಾರಿಗಳು ಘೋಷಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಜಿಲ್ಲಾ ಸಮಿತಿ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ, ಜೋಯಿಡಾ ತಾಲೂಕು ಅಧ್ಯಕ್ಷ ಪ್ರೇಮಾನಂದ ವೆಳೀಪ, ತಾಲೂಕು ಕಾರ್ಯದರ್ಶಿ ರಾಜೇಶ ಗಾವಡಾ, ಕಾರ್ಮಿಕ ಮುಖಂಡರಾದ ಯಮುನಾ ಗಾಂವ್ಕರ ಅವರು ಇದಕ್ಕೆ ಒಪ್ಪಿದರು. ಈ ಎಲ್ಲರೂ ಸೇರಿ ಹೋರಾಟ ತಾತ್ಪೂರ್ತಿಕ ಹಿಂಪಡೆಯುವದರ ಜೊತೆ ಸಭೆಯಲ್ಲಿ ಹಕ್ಕೊತ್ತಾಯ ಮಾಡಲು ನಿರ್ಣಯಿಸಿದರು. ಪ್ರಮುಖರಾದ ಗಣೇಶ ರಾಠೋಡ್, ಚಂದ್ರು ಸಾವಂತ, ಪ್ರಕಾಶ ವೆಳಿಪ, ಶಾಂತಾ ವೆಳಿಪ್, ಉಮೇಶ ವೆಳಿಪ, ಮಾದೇವ ಸಾವಂತ, ಗಣಪತಿ ಕುಂಡಲ, ರವಿ ಮಿರಾಶಿ ದೇವಿದಾಸ ಮಿರಾಸಿ , ವೆಲಿಕಾ ಸಾವಂತ, ಗೌರವಿ ಸಾವಂತ ಸಹ ಇದಕ್ಕೆ ಸಮ್ಮತಿ ಸೂಚಿಸಿದರು.