ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಾಗಿದ್ದರೂ `ಲಕ್ಕಿ ಡ್ರಾ ಕೂಪನ್’ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ. ಗಣೇಶ ಉತ್ಸವದ ಅವಧಿಯಲ್ಲಿ `ಡ್ರಾ’ ನಡೆಸುವ ಉತ್ಸವ ಸಮಿತಿ ವಿರುದ್ಧ ಕಾನೂನು ಕ್ರಮವಾಗುತ್ತಿದೆಯೇ ವಿನ: `ಲಕ್ಕಿ ಡ್ರಾ’ ಹೆಸರಿನಲ್ಲಿ ನಿತ್ಯವೂ ನಡೆಯುವ ವಂಚನೆಯ ಜಾಲದ ವಿರುದ್ಧ ಕ್ರಮ ಜರುಗಿಸಲು ಯಾರಿಗೂ ಅಧಿಕಾರವಿಲ್ಲ!
ಜನರಿಗೆ ಆಮೀಷ ಒಡ್ಡುವ ದಂಧೆ ನಿಯಂತ್ರಣಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಪ್ಲೆಯಿಂಗ್ ಸ್ಕಾಡ್ ರಚನೆಯಾಗಿದೆ. ಮಟ್ಕಾ, ಲಾಟರಿ, ಬೆಟ್ಟಿಂಗ್ ಸೇರಿ ವಿವಿಧ ಆಮೀಷಗಳನ್ನು ಒಡ್ಡುವವರ ಮೇಲೆ ಪ್ಲೆಯಿಂಗ್ ಸ್ಕಾಡ್ ಅಧಿಕಾರಿಗಳು ದಾಳಿ ನಡೆಸುವ ಅಧಿಕಾರ ಹೊಂದಿದ್ದಾರೆ. ಆದರೆ, ಲಾಟರಿ ಮಾದರಿಯಲ್ಲಿಯೇ ಕಾರ್ಯ ನಿರ್ವಹಿಸುವ `ಲಕ್ಕಿ ಡ್ರಾ ಕೂಪನ್’ ಮಾರಾಟದ ವಿರುದ್ಧ ಕ್ರಮ ಜರುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾನೂನಿನಲ್ಲಿರುವ ನ್ಯೂನ್ಯತೆಯನ್ನು ಬಳಸಿಕೊಂಡು `ಲಕ್ಕಿ ಡ್ರಾ’ ಎಂಬ ಮಾರಾಟ ಜಾಲ ಹೆಮ್ಮರವಾಗಿ ಬೆಳೆದಿದೆ. ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಸಹ `ಲಕ್ಕಿ ಡ್ರಾ ಕೂಪನ್’ ಮಾರಾಟದ ಹೆಸರಿನಲ್ಲಿ ವಂಚನೆ ಜೋರಾಗಿದೆ.
ಕರ್ನಾಟಕ ರಾಜ್ಯ ಲಾಟರಿ ರೆಗ್ಯೂಲೇಶನ್ ಆಕ್ಟ್ 1998ರ ಪ್ರಕಾರ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ಲೆಯಿಂಗ್ ಸ್ಕಾಡ್ ರಚಿಸಿದೆ. ಜಿಲ್ಲಾಧಿಕಾರಿಗಳು ಈ ಸಮಿತಿ ಅಧ್ಯಕ್ಷರಾಗಿದ್ದು, ಪೋಲೀಸ್ ವರಿಷ್ಠಾಧಿಕಾರಿಗಳು, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು (ಜಾರಿ) ಶಿರಸಿ ಮತ್ತು ಸಹಾಯಕ ನಿರ್ದೇಶಕರು, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಬಹುಮಾನ ಯೋಜನೆ, ಅಭಿವೃದ್ಧಿ ನೆಪ, ಹಬ್ಬ-ಉತ್ಸವಗಳ ಹೆಸರಿನಲ್ಲಿ ಲಾಟರಿ ಟಿಕೆಟ್ ಮಾರಾಟದ ಮೇಲೆ ಕಣ್ಣಿಡುವುದು ಈ ಸಮಿತಿಯ ಮುಖ್ಯ ಉದ್ದೇಶ. ಸಾರ್ವಜನಿಕರ ಸಹಕಾರದಲ್ಲಿಯೇ ಲಾಟರಿ ನಿಷೇಧಕ್ಕೆ ಸಮಿತಿಯವರು ಪ್ರಯತ್ನಿಸುತ್ತಿದ್ದು, ಇದರ ಅಂಗವಾಗಿ ಆಮೀಷ ಒಡ್ಡುವ ದಂಧೆಕೋರರ ವಿರುದ್ಧ ಪೊಲೀಸರು ನಿರಂತರ ಪ್ರಕರಣ ದಾಖಲಿಸುತ್ತಿದ್ದಾರೆ.
ಆದರೆ, ಬಹುಮಾನ ಯೋಜನೆಗಳ ಹೆಸರಿನಲ್ಲಿ ನಡೆಯುವ `ಲಕ್ಕಿ ಡ್ರಾ ಕೂಪನ್’ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದಲೂ ಸಾಧ್ಯವಾಗಿಲ್ಲ. ಕಾರಣ, ಪೊಲೀಸರಿಗೂ ಅದನ್ನು ತಡೆಯುವ ಅಧಿಕಾರವಿಲ್ಲ. ಸದ್ಯದ ಕಾನೂನಿನ ಪ್ರಕಾರ ಲಾಟರಿ ಟಿಕೆಟ್ ಮಾರಾಟ ಮಾತ್ರ ಅಪರಾಧವೇ ವಿನ: `ಲಕ್ಕಿ ಡ್ರಾ ಕೂಪನ್’ ಮಾರಾಟ ಮಾಡುವುದು ಅಪರಾಧವಲ್ಲ. `ಲಕ್ಕಿ ಡ್ರಾ ಕೂಪನ್’ ಮಾರಾಟಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಅದು ಪಾರದರ್ಶಕವಾಗಿರಬೇಕು ಎಂಬ ಕಟ್ಟುಪಾಡುಗಳು ಸಹ ಇಲ್ಲ.
ಲಾಟರಿ ನಿಷೇಧದ ಅವಧಿಯಲ್ಲಿಯೇ `ಲಕ್ಕಿ ಡ್ರಾ’ ಗೊಂದಲ ಹುಟ್ಟಿಕೊಂಡಿತು. `ಲಕ್ಕಿ ಡ್ರಾ’ ನಿಷೇಧ ಕುರಿತ ಚರ್ಚೆ ಜೋರಾಗಿಯೇ ನಡೆಯಿತು. ಕಾನೂನು ಇಲಾಖೆ ಸಹ ಈ ಬಗ್ಗೆ ಸ್ಪಷ್ಠನೆ ನೀಡಿದ್ದು, ಅದೇ ಆಧಾರದಲ್ಲಿ ಜಿಲ್ಲಾಡಳಿತ ಸಹ ನಡೆದುಕೊಳ್ಳುತ್ತಿದೆ. ಉತ್ತರ ಕನ್ನಡ ಜಿಲ್ಲಾಡಳಿತದ ಪತ್ರಕ್ಕೆ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆಯ ನಿರ್ದೇಶಕರು ಉತ್ತರಿಸಿದ್ದು `ಲಕ್ಕಿ ಡ್ರಾ ಅಪರಾಧ ಅಲ್ಲ’ ಎಂದು ಹೇಳಿದ್ದಾರೆ. ಹೀಗಾಗಿ ಸರ್ಕಾರ ಲಾಟರಿ, ಮಟ್ಕಾ, ಹಬ್ಬ-ಹರಿದಿನಗಳಲ್ಲಿ ನಡೆಯುವ ಲಾಟರಿ ವಿರುದ್ಧ ಕ್ರಮ ಜರುಗಿಸುತ್ತಿದೆಯೇ ವಿನಃ ಲಕ್ಕಿ ಡ್ರಾ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ.