ವನ್ಯಜೀವಿ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರನ್ನು ಯಲ್ಲಾಪುರದ ಮಂಚಿಕೇರಿ ಅರಣ್ಯ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಆ ಪೈಕಿ ಮೂವರು ಸಿಕ್ಕಿಬಿದ್ದಿದ್ದು, ಮತ್ತೊಬ್ಬರು ತಲೆಮರೆಸಿಕೊಂಡಿದ್ದಾರೆ.
ಶಿರಸಿ ಸೋಂದಾ ಕ್ರಾಸಿನ ಹಸನ್ ಖಾನ್ ಇಬ್ರಾಹಿಂ ಖಾನ್, ಮಜಿನುರ್ ರೆಹಮಾನ್ ಅಬ್ದುಲ್ ಮತಲಿಬ್, ಸೋದೆಪೇಟೆಯ ಅಬ್ದುಲ್ ಜಬ್ಬಾರ್ ಹಬೀಬು ರೆಹಮಾನ್ ಸಾಬ್ ಹಾಗೂ ಹೆಗಡೆಕಟ್ಟಾದ ಅಬ್ದುಲ್ ಹನನ್ ಮಹಮದ್ ಸಾಬ್ ಅವರು ಕಾರಿನಲ್ಲಿ ಮಂಚಿಕೇರಿ ಬಳಿ ಬಂದಿದ್ದರು. ಅವರೆಲ್ಲರೂ ಶಿಖಾರಿ ಶೂರರಾಗಿದ್ದು, ಆಗಾಗ ಕಾಡುಪ್ರಾಣಿ ಬೇಟೆಗಾಗಿ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದರು. ಡಿಸೆಂಬರ್ 30ರಂದು ನಸುಕಿನಲ್ಲಿ ಆ ನಾಲ್ಕು ಜನ ಚಕ್ಕೊತ್ತಿ ಅರಣ್ಯ ಪ್ರದೇಶಕ್ಕೆ ನುಗ್ಗಿದ್ದರು.
ಆ ಪೈಕಿ ಅಬ್ದುಲ್ ಹನನ್ ಮಹಮದ್ ಸಾಬ್ ಅವರ ಕೈಯಲ್ಲಿ ಬಂದೂಕು ಇತ್ತು. ಉಳಿದವರು ದೊಡ್ಡದಾದ ಕತ್ತಿ, ಚಾಕುಗಳನ್ನು ಹೊಂದಿದ್ದರು. ಎಲ್ಲರೂ ಸೇರಿ ಕಾಡು ಪ್ರಾಣಿ ಹುಡುಕಾಟ ನಡೆಸುವಾಗ ಅರಣ್ಯ ಸಿಬ್ಬಂದಿ ಅವರನ್ನು ನೋಡಿದರು. ಅರಣ್ಯ ಸಿಬ್ಬಂದಿ ಬೆನ್ನತ್ತಿರುವುದನ್ನು ಗಮನಿಸಿ ಅವರೆಲ್ಲರೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ, ಅದುಪ್ರಯೋಜನಕ್ಕೆ ಬರಲಿಲ್ಲ.
ಹಸನ್ ಖಾನ್ ಇಬ್ರಾಹಿಂ ಖಾನ್, ಮಜಿನುರ್ ರೆಹಮಾನ್ ಅಬ್ದುಲ್ ಮತಲಿಬ್, ಸೋದೆಅಬ್ದುಲ್ ಜಬ್ಬಾರ್ ಹಬೀಬು ರೆಹಮಾನ್ ಸಾಬ್ ಅವರನ್ನು ಅರಣ್ಯ ಸಿಬ್ಬಂದಿ ಬಂಧಿಸಿದರು. ಬಂದೂಕು ಹಿಡಿದಿದ್ದ ಅಬ್ದುಲ್ ಹನನ್ ಮಹಮದ್ ಸಾಬ್ ಓಡಿ ತಪ್ಪಿಸಿಕೊಂಡರು. ಕಾರ್ಯಾಚರಣೆ ನಡೆಸಿದ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬಚ್ಚೋಳ್ಳಿ ಅವರು ಆ ಎಲ್ಲರನ್ನು ಜೈಲಿಗೆ ಕಳುಹಿಸಿದರು. ಡಿಎಫ್‌ಓ ಹರ್ಷಭಾನು ಅವರು ಈ ಮಾಹಿತಿ ನೀಡಿದರು.