ಬೈಕ್ ಸ್ಕಿಡ್ ಆದ ಪರಿಣಾಮ ಗಾಯಗೊಂಡಿದ್ದ ಸುರೇಶ ನಾಯಕ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿರಂತರ ಚಿಕಿತ್ಸೆಯ ನಡುವೆಯೂ ಗುರುವಾರ ಅವರು ಸಾವನಪ್ಪಿದ್ದಾರೆ.
Advertisement. Scroll to continue reading.
ಅಂಕೋಲಾದ ಭಾವಿಕೇರಿಯಲ್ಲಿ ಸುರೇಶ ಗಿರಿಯಣ್ಣ ನಾಯಕ (48) ಅವರು ವಾಸವಾಗಿದ್ದರು. ಡಿಸೆಂಬರ್ 1ರ ರಾತ್ರಿ 11.50ಕ್ಕೆ ಅವರು ವೇಗವಾಗಿ ಬೈಕ್ ಓಡಿಸಿಕೊಂಡು ಹೊರಟಿದ್ದರು. ಅಂಕೋಲಾ ಕಡೆಯಿಂದ ಬೇಲಿಕೇರಿ ಕಡೆ ಅವರು ಹೊರಟಿದ್ದ ಬೈಕು ಸ್ಕಿಡ್ ಆಗಿ ಬಿದ್ದಿತ್ತು.
ಕೇಣಿ ಸೇತುವೆ ಬಳಿಯ ಮದ್ದಲೇಶ್ವರ ದೇವಾಲಯ ಎದುರಿನ ಬೇಲಿಕೇರಿ ಡಾಂಬರು ರಸ್ತೆಯಲ್ಲಿ ಬಿದ್ದಿದ್ದ ಸುರೇಶ ನಾಯ್ಕ ಅವರಿಗೆ ದೊಡ್ಡ ಪೆಟ್ಟು ಆಗಿರಲಿಲ್ಲ. ಆದರೆ, ತಲೆ ಒಳಭಾಗದಲ್ಲಿ ಅವರಿಗೆ ನೋವಾಗಿತ್ತು. ಅವರನ್ನು ಅಲ್ಲಿನ ಜನ ರಕ್ಷಿಸಿ ಅಂಕೋಲಾ ಆಸ್ಪತ್ರೆಗೆ ಕಳುಹಿಸಿದ್ದರು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕಿಮ್ಸ ಆಸ್ಪತ್ರೆಗೆ ರವಾನಿಸಿದ್ದರು.
ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸುರೇಶ ನಾಯಕ ಅವರು ಗುರುವಾರ ಕೊನೆಯುಸಿರೆಳೆದರು. ಪುರ್ಲಕ್ಕಿಬೇಣದ ನಿವೃತ್ತ ಸೈನಿಕ ಗೋಪಾಲ ಗಿರಿಯಣ್ಣ ನಾಯಕ ಅವರು ಅಪಘಾತದ ಬಗ್ಗೆ ಪೊಲೀಸರಿಗೆ ವರದಿ ಒಪ್ಪಿಸಿದ್ದು, ಆಸ್ಪತ್ರೆಯವರು ನೀಡಿದ ಸಾವಿನ ಮಾಹಿತಿಯನ್ನು ಪೊಲೀಸರು ಪ್ರಕರಣದಲ್ಲಿ ದಾಖಲಿಸಿದರು.
`ಹೆಲ್ಮೆಟ್ ಧರಿಸಿ.. ಬೈಕ್ ಓಡಿಸಿ’