ಕರಾವಳಿ ಉತ್ಸವಕ್ಕೆ ಆಗಮಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಸಾಕಷ್ಟು ಪ್ರಮಾಣದಲ್ಲಿ ಉಡಾಫೆ ಮಾತನಾಡಿದ್ದಾರೆ.
ನದಿ ಜೋಡಣೆ ವಿಷಯಕ್ಕೆ ವಿರೋಧವ್ಯಕ್ತವಾಗಿರುವುದನ್ನು ಅವರು ಗ್ಯಾರಂಟಿ ಯೋಜನೆಗೆ ಹೋಲಿಕೆ ಮಾಡಿದ್ದಾರೆ. `ಗ್ಯಾರಂಟಿ ಯೋಜನೆಯನ್ನು ಜನ ವಿರೋಧ ಮಾಡಿದ್ದರು. ಆದರೆ, ಈಗ ಎಲ್ಲರೂ ಅದನ್ನು ಬಳಸುತ್ತಿಲ್ಲವಾ? ಗ್ಯಾರಂಟಿ ಎಲ್ಲವನ್ನು ವಾಪಸ್ಸು ಕೊಟ್ಟುಬಿಡಲಿ, ನೋಡೋಣ’ ಎಂದು ಡಿ ಕೆ ಶಿವಕುಮಾರ ಸವಾಲು ಹಾಕಿದರು.
ಕಾರವಾರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು `ವ್ಯರ್ಥವಾಗಿ ಹರಿಯುವ ನೀರನ್ನು ಸರ್ಕಾರ ಸದ್ಬಳಕೆ ಮಾಡಲಿದೆ. ಯಾರು ಎಷ್ಟೇ ವಿರೋಧ ಮಾಡಿದರೂ ರೈತರು ಹಾಗೂ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಯೋಜನೆ ಮಾಡಲಿದ್ದೇವೆ. ಕೇಂದ್ರ ಸರ್ಕಾರದ ಶೇ 90ರಷ್ಟು ಹಾಗೂ ರಾಜ್ಯ ಸರ್ಕಾರದ ಶೇ 10ರಷ್ಟು ಅನುಧಾನದ ಅಡಿ ಈ ಕೆಲಸ ಕಾರ್ಯಗತವಾಗುವ ಒಪ್ಪಂದ ನಡೆದಿದೆ’ ಎಂದು ಡಿಕೆ ಶಿವಕುಮಾರ ಗಟ್ಟಿಯಾಗಿ ಹೇಳಿದರು. ಶರಾವತಿ ಭೂಗತ ಯೋಜನೆ ಕುರಿತು ಮಾತನಾಡಿದ ಅವರು `ವಿದ್ಯುತ್ ಸಹ ಪ್ರೀ ಕೊಡುತ್ತಿದ್ದೇವೆ. ಅದನ್ನು ಹೇಗೆ ಕೊಡಲು ಸಾಧ್ಯ? ಶರಾವತಿ ಯೋಜನೆ ರಾಜ್ಯಕ್ಕೆ ದೊಡ್ಡ ಕೊಡುಗೆಯಾಗಿದ್ದು, ಅದಕ್ಕೂ ವಿರೋಧ ಸರಿಯಲ್ಲ’ ಎಂದರು.
`ರಸ್ತೆ ಅಗಲೀಕರಣಕ್ಕೂ ವಿರೋಧ ಮಾಡುತ್ತಾರೆ. ಕಾರ್ಖಾನೆ ತೆರೆದರೂ ವಿರೋಧ ಮಾಡುತ್ತಾರೆ. ಯೋಜನೆಯ ಡಿಪಿಆರ್ ತಯಾರು ಮಾಡಲು ಅಧಿಕಾರಿಗಳಿಗೆ ಅನುಮತಿ ಕೊಟ್ಟಿದ್ದೇನೆ. ಎಷ್ಟು ನೀರನ್ನು ಉಪಯೋಗಿಸಲು ಸಾಧ್ಯವೋ ಅಷ್ಟನ್ನು ಸರಿಯಾಗಿ ಬಳಸಿಕೊಳ್ಳಲಾಗುತ್ತದೆ’ ಎಂದರು. ನದಿ ಜೋಡಣೆಗೆ ಸ್ಥಳೀಯರ ವಿರೋಧವಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದು, `ಏನೇ ಮಾಡಿದರೂ ವಿರೋಧ ಮಾಡುವವರಿದ್ದಾರೆ. ವಿರೋಧ ದೊಡ್ಡದಲ್ಲ. ಯೋಜನೆಯಿಂದ ಹಾನಿ ಆದವರಿಗೆ ಪರಿಹಾರ ಕೊಡಲು ಕಾನೂನಿನಲ್ಲಿ ಅವಕಾಶವಿದೆ. ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.
ಸೇತುವೆ ವಿಷಯದಲ್ಲಿಯೂ ಉಡಾಫೆ ಉತ್ತರ!
`ಗೋಕರ್ಣ-ಗಂಗಾವಳಿ ಸೇತುವೆ ಉದ್ಘಾಟನೆಗೆ ಸಿದ್ಧವಾಗಿದ್ದರೂ ಉದ್ಘಾಟನೆ ನಡೆದಿಲ್ಲ. ಉದ್ಘಾಟನೆ ನಡೆಯದ ಕಾರಣ ಬಸ್ಸುಗಳನ್ನು ಬಿಡುತ್ತಿಲ್ಲ’ ಎಂದು ಪತ್ರಕರ್ತರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಗಮನಸೆಳೆದರು. `ಸೇತುವೆಗಾಗಿ 45 ವರ್ಷ ಕಾದಿದ್ದೀರಿ. ಇನ್ನೂ ಕೆಲ ದಿನ ಕಾಯಲು ಏನು ಸಮಸ್ಯೆ? ಎಂಬ ನಿಟ್ಟಿನಲ್ಲಿ ಈ ವೇಳೆಯಲ್ಲಿಯೂ ಡಿಕೆ ಶಿವಕುಮಾರ ಅವರು ಉಡಾಫೆಯಾಗಿ ಮಾತನಾಡಿದರು. ನಂತರ `ಸಂಜೆ ಆದ ಕಾರಣ ಉದ್ಘಾಟನೆ ಬೇಡ ಎಂದು ನಿರ್ಣಯಿಸಿದ್ದು, ಸೇತುವೆ ಉದ್ಘಾಟನೆಗೆ ಮತ್ತೆ ಬರುವೆ’ ಎಂದು ಸ್ಪಷ್ಟಪಡಿಸಿದರು.
ಶರಾವತಿ ಯೋಜನೆ ದೊಡ್ಡ ಆಸ್ತಿ!
`ನಾನು ಪವರ್ ಮಿನಿಸ್ಟರ್ ಆಗಿದ್ದೆ. ವಿದೇಶಗಳಿಗೆ ಹೋಗಿ ನೋಡಿದ್ದೇನೆ. ಶರಾವತಿ ಯೋಜನೆಯಿಂದ ಯಾರಿಗೂ ಹಾನಿ ಇಲ್ಲ. ಈಗ ವಿದ್ಯುತ್ ಪ್ರೀ ಕೊಡುತ್ತಿದ್ದೇವೆ. ಅದನ್ನು ಎಲ್ಲಿಂದ ಕೊಡಲು ಸಾಧ್ಯ? ಅದೊಂದು ವಿಶೇಷವಾದ ಯೋಜನೆ. ಅದಕ್ಕೆ ವಿರೋಧ ಮಾಡುವ ಅಗತ್ಯವಿಲ್ಲ’ ಎಂದರು.