ಶಿರಸಿ ಜಾತ್ರೆ ವಿಷಯದಲ್ಲಿ ಶಾಸಕ ಭೀಮಣ್ಣ ನಾಯ್ಕ ಅವರು ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದಾರೆ. ಕಳೆದ ಜಾತ್ರೆಗೆ ಸರ್ಕಾರದಿಂದ 5 ಕೋಟಿ ರೂ ಅನುದಾನ ಬಂದಿರುವುದಾಗಿ ಭೀಮಣ್ಣ ನಾಯ್ಕ ಅವರು ಹೇಳಿಕೊಂಡಿದ್ದು, ಇನ್ನೊಂದು ಜಾತ್ರೆ ಘೋಷಣೆ ಆದರೂ `ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ’ ಎಂಬ ಸಂಗತಿ ಹೊರಬಿದ್ದಿದೆ.
ಮಾಹಿತಿ ಹಕ್ಕು ಕಾಯ್ದೆಯ ದಾಖಲೆಗಳಿಂದ ಈ ಸತ್ಯ ಬಹಿರಂಗವಾಗಿದ್ದು, ಶಾಸಕರು ಆಡಿದ ಸುಳ್ಳಿಗೆ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅಸಮಧಾನವ್ಯಕ್ತಪಡಿಸಿದ್ದಾರೆ. `ಸುಳ್ಳು ಹೇಳಿ ಸಿಕ್ಕಿಬಿದ್ದ ಶಾಸಕರು ಮಾರಿಕಾಂಬೆಯ ಸನ್ನಿಧಾನದಲ್ಲಿ ಪ್ರಾಯಶ್ಚಿತ ಮಾಡಿಕೊಂಡು ಈ ಬಾರಿಯಾದರೂ ಆ ಹಣ ತರಬೇಕು’ ಎಂದು ಅನಂತಮೂರ್ತಿ ಹೆಗಡೆ ಆಗ್ರಹಿಸಿದ್ದಾರೆ.
`ಪಾಪ ಕಳೆದುಕೊಳ್ಳಲು ದೇವಸ್ಥಾನಕ್ಕೆ ತೆರಳುತ್ತಾರೆ. ಆದರೆ, ಶಾಸಕ ಭೀಮಣ್ಣ ನಾಯ್ಕ ಅವರು ದೇವಸ್ಥಾನದ ವಿಷಯದಲ್ಲಿ ಸುಳ್ಳು ಹೇಳಿ ದೊಡ್ಡ ಪಾಪ ಮಾಡಿದ್ದಾರೆ. ಶಿರಸಿಯಲ್ಲಿ ಸಾಕಷ್ಟು ಸುಧಾರಣಾ ಕೆಲಸ ಆಗಬೇಕಿದ್ದು, ಜಾತ್ರೆಯ ನೆಪದಲ್ಲಾದರೂ ಈ ಕೆಲಸ ನಡೆಯಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಸರಕಾರಕ್ಕೆ ಕರಾವಳಿ ಉತ್ಸವದ ಹೆಸರಿನಲ್ಲಿ ಮೋಜು-ಮಸ್ತಿ ಮಾಡಲು ಹಣವಿದೆ. ಆದರೆ, ಶಿರಸಿ ಜಾತ್ರೆಗೆ ನೀಡಲು ಹಣವಿಲ್ಲ’ ಎಂದವರು ಕಿಡಿಕಾರಿದ್ದಾರೆ.
`ಕಾಂಗ್ರೆಸ್ ಸರಕಾರದಲ್ಲಿ ಈವರೆಗೆ ಬಸವ ವಸತಿ ಯೋಜನೆ, ಅಂಬೇಡ್ಕರ್ ವಸತಿ ಯೋಜನೆ, ದೇವರಾಜ್ ಅರಸು ವಸತಿ ಯೋಜನೆ ಅಡಿಯಲ್ಲಿ ಒಂದೇ ಒಂದು ಮನೆಯೂ ಶಿರಸಿ ಸಿದ್ದಾಪುರ ಭಾಗದಲ್ಲಿ ಮಂಜೂರಾಗಿಲ್ಲ. ಮನೆಹಾನಿ ಆದ ಸ್ಥಳಗಳಿಗೆ ಭೇಟಿ ನೀಡುವ ಶಾಸಕರು ಶಾಶ್ವತ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ಮಾತ್ರ ನೀಡಿದ್ದು, ಅದು ಈಡೇರಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದು, ಆ ಕುರಿತಾದ ದಾಖಲೆಯನ್ನು ಸಹ ಸಂಗ್ರಹಿಸಿದ್ದಾರೆ.
`ದೇವನಮನೆ ಗ್ರಾಮದಲ್ಲಿ ಅಂಗನವಾಡಿ ಕಾಮಗಾರಿಗೆ ಕಳೆದ ಮೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ಆರಂಭವೇ ಆಗಿಲ್ಲ. ಸಂಬAಧ ಪಟ್ಟ ಇಂಜಿನೀಯರ್ ಕೇಳಿದರೆ ಸಮರ್ಪಕ ಉತ್ತರ ದೊರೆಯುತ್ತಿಲ್ಲ. ಮಕ್ಕಳಿಗೆ ಅಂಗನವಾಡಿ ಕಟ್ಟಡ ಇಲ್ಲದೆ ಅವರಿವರ ಮನೆಯಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ’ ಎಂದು ಮತ್ತಿಘಟ್ಟ ಗ್ರಾ ಪಂ ಸದಸ್ಯ ನಾರಾಯಣ ಮತ್ತಿಘಟ್ಟ ದೂರಿದ್ದಾರೆ.
ಕೊಡ್ನಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಗಡೆ ಸಹ ತಮ್ಮ ಅಸಮಧಾನ ಹೊರಹಾಕಿದ್ದಾರೆ. ಬಿಜೆಪಿ ನಗರ ಮಂಡಲ ಅಧ್ಯಕ್ಷ ಆನಂದ್ ಸಾಲೇರ್, ಪಕ್ಷದ ಪ್ರಧಾನ ಕಾರ್ಯದರ್ಶಿ ನಾಗರಾಜ್ ನಾಯ್ಕ್, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಬಳ್ಳಾರಿ, ಪ್ರಮುಖರಾದ ಜಿ ಎಸ್ ಹೆಗಡೆ ಸಹ ಜಾತ್ರೆ ಹೆಸರಿನಲ್ಲಿ ಶಾಸಕರು ಪುಕ್ಕಟ್ಟೆ ಪ್ರಚಾರಪಡೆದಿದನ್ನು ಖಂಡಿಸಿದ್ದಾರೆ.