ಶಿರಸಿ – ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುವ ಬಹುತೇಕರಿಗೆ ಹೊಗೆ ಉಗುಳುವ ಬಸ್ಸುಗಳು ಹಿಂಸೆ ನೀಡುತ್ತಿದೆ. ಈ ಮಾರ್ಗದಲ್ಲಿ ಚಲಿಸುವ ಅನೇಕ ಬಸ್ಸುಗಳು ಹೊಗೆ ಉಗುಳುತ್ತಿದ್ದು, ಜನ ತೊಂದರೆ ಅನುಭವಿಸುತ್ತಿದ್ದಾರೆ.
ಶಿರಸಿ-ಯಲ್ಲಾಪುರ ರಸ್ತೆ ಮೂರು ಕಡೆ ಹದಗೆಟ್ಟಿದೆ. ಆ ಭಾಗದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಈ ಮಾರ್ಗವಾಗಿ ಸಂಚರಿಸುವ ಸ್ಥಳೀಯ ಬಸ್ಸುಗಳು ಜನರ ಆರೋಗ್ಯ ಹಾಳು ಮಾಡುತ್ತಿವೆ. ಅಪಾರ ಪ್ರಮಾಣದಲ್ಲಿ ಹೊಗೆ ಉಗುಳುತ್ತಿದ್ದರೂ ಅದನ್ನು ಪ್ರಶ್ನಿಸುವವರಿಲ್ಲ.
`ಮೊದಲು ಈ ಮಾರ್ಗದಲ್ಲಿ ಸಂಚರಿಸುವವರು ಧೂಳು ಸೇವಿಸಬೇಕಿತ್ತು. ಇದೀಗ ಹೊಗೆ ಸೇವಿಸಬೇಕಿದೆ. ಪ್ರಯಾಣಿಕರ ಆರೋಗ್ಯದ ಬಗ್ಗೆ ಕಾಳಜಿವಹಿಸುವವರೂ ಇಲ್ಲ’ ಎಂದು ಬೈಕ್ ಸವಾರರು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಮಂಚಿಕೇರಿವರೆಗೆ ತೆರಳಿ ಬರುವ ಬಸ್ಸಿನ ಜೊತೆ ಶಿರಸಿಗೆ ಹೋಗಿ ಬರುವ ಬಸ್ಸು ಸಹ ಸಾಕಷ್ಟು ಪ್ರಮಾಣದಲ್ಲಿ ವಾಯು ಮಾಲಿನ್ಯ ಮಾಡುತ್ತಿದೆ.
ಆ ಬಸ್ಸಿನ ಹಿಂದೆ ಹೋಗುವವರಿಗೆ ಅಲ್ಲಿರುವ ಹೊಗೆ ಮೋಡದ ಹಾಗೇ ಭಾಸವಾಗುತ್ತಿದೆ. ಹೊಗೆಯ ದುರ್ವಾಸನೆಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ. ಅದಾಗಿಯೂ ಕೆಟ್ಟ ಬಸ್ಸುಗಳನ್ನು ಗುಜುರಿಗೆ ಕಳುಹಿಸುವ ಕೆಲಸ ನಡೆದಿಲ್ಲ.