ಸಾಲ ಮಾಡಿ ಅದನ್ನು ತೀರಿಸದೇ ತಿರುಗಾಡುತ್ತಿದ್ದ ವ್ಯಕ್ತಿಗಳಿಬ್ಬರಿಗೆ ನ್ಯಾಯಾಲಯ ದಂಡ ವಿಧಿಸಿದೆ.
ಶಿರಸಿಯ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದಲ್ಲಿ ಶಿವಪ್ರಸಾದ ಗೌಡ ಅವರು 1.25 ಲಕ್ಷ ರೂ ಸಾಲಪಡೆದಿದ್ದರು. ಆದರೆ, ಆ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿರಲಿಲ್ಲ. ಹೀಗಾಗಿ ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೆಟ್ಟಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಸಂಘಕ್ಕೆ ನೀಡಿದ್ದ ಚೆಕ್ ಅಮಾನ್ಯವಾದ ಬಗ್ಗೆ ಅವರು ದೂರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 1.25 ಲಕ್ಷ ರೂ ಸಾಲಪಡೆದಿದ್ದ ವ್ಯಕ್ತಿಗೆ 1 ಲಕ್ಷ ರೂ ದಂಡ ಪಾವತಿಸುವಂತೆ ಸೂಚಿಸಿದೆ. ಆ ದಂಡದ ಜೊತೆ ಸಾಲವನ್ನು ಪಾವತಿ ಮಾಡುವುದು ಸಾಲಗಾರನಿಗೆ ಅನಿವಾರ್ಯವಾಗಿದೆ.
ಮತ್ತೊಂದು ಪ್ರಕರಣದಲ್ಲಿಯೂ ನ್ಯಾಯಾಲಯ ಇದೇ ಬಗೆಯ ಆದೇಶ ಮಾಡಿದೆ. ಶಿರಸಿಯಲ್ಲಿ ಸಿಮೆಂಟ್ ಕಂಬ, ರಿಂಗ್ ಮಾಡುವ ಪರಮೇಶ್ವರ ನಾಯ್ಕ ಅವರು ಗಂಗಾಧರ ನಾಯ್ಕ ಅವರಿಂದ ಸಾಲಪಡೆದಿದ್ದರು. ಅವರು ಸಹ ಸಾಲ ಮರು ಪಾವತಿ ಮಾಡಿರಲಿಲ್ಲ. ಸಾಲ ಮರುಪಾವತಿಗೆ ನೀಡಿದ ಚೆಕ್ ಅಮಾನ್ಯವಾಗಿದ್ದರಿಂದ ಗಂಗಾಧರ ನಾಯ್ಕ ಅವರು ಕೋರ್ಟಿನ ಮೊರೆ ಹೋಗಿದ್ದರು. 2023ರಲ್ಲಿ ಕೊಟ್ಟ ಸಾಲ ಬಾರದ ಕಾರಣ ಗಂಗಾಧರ ನಾಯ್ಕ ಅವರು ಅಳಲು ತೋಡಿಕೊಂಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಪರಮೇಶ್ವರ ನಾಯ್ಕ ಅವರಿಗೆ 1.1 ಲಕ್ಷ ರೂ ದಂಡ ವಿಧಿಸಿದೆ.