ಪ್ರಸಿಲ್ಲಾ ಹಾಗೂ ಪ್ರೇಮಕುಮಾರಿ ಅವರಿಬ್ಬರು ಆಪ್ತ ಸ್ನೇಹಿತರಾಗಿದ್ದು, ಪ್ರೇಮಕುಮಾರಿ ಅವರು ಸ್ನೇಹಿತೆಗೆ ಮೋಸ ಮಾಡಿದ್ದಾರೆ. ಪ್ರಸಿಲ್ಲಾ ಅವರ ಮನೆಗೆ ಬಂದಿದ್ದ ಪ್ರೇಮಕುಮಾರಿ ಅವರು ಆ ಮನೆಯಲ್ಲಿದ್ದ ಒಡವೆ ಕದ್ದು ಪರಾರಿಯಾಗಿದ್ದಾರೆ.
Advertisement. Scroll to continue reading.
ದಾಂಡೇಲಿಯ ಜಂಬೇಹಾಳದ ಸಿ ಎಸ್ ಐ ಚರ್ಚ ಬಳಿ ಪ್ರಸಿಲ್ಲಾ ರಾಜಾ ನಾಯ್ಡು ಅವರು ವಾಸವಾಗಿದ್ದಾರೆ. ದಾಂಡೇಲಿಯ ಡಿಎಫ್‌ಎ ಟೌನ್‌ಶಿಫ್ ಬಳಿ ಪ್ರೇಮಕುಮಾರಿ ಸುಂದರ ಕಲ್ವಕುರಿ ಅವರು ವಾಸವಾಗಿದ್ದಾರೆ. ಈ ಇಬ್ಬರು ಪರಸ್ಪರ ಪರಿಚಯವಾಗಿ ಗೆಳತಿಯರಾಗಿ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದು, ಅದಕ್ಕೆ ಇದೀಗ ವಿರಾಮ ಬಿದ್ದಿದೆ.
ಪ್ರೇಮಕುಮಾರಿ ಅವರು ಆಗಾಗ ಪ್ರಸಿಲ್ಲಾ ಅವರ ಮನೆಗೆ ಬರುತ್ತಿದ್ದರು. ಪ್ರಸಿಲ್ಲಾ ಅವರ ಮನೆಯಲ್ಲಿಯೇ ಪ್ರೇಮಕುಮಾರಿ ಅವರು ಊಟ ಮಾಡುತ್ತಿದ್ದರು. ಅನೇಕ ಸಲ ಅಲ್ಲಿಯೇ ವಾಸ್ತವ್ಯವನ್ನು ಹೂಡುತ್ತಿದ್ದರು. ಹೀಗಿರುವಾಗ ಅಕ್ಟೊಬರ್ 30ರಂದು ಪ್ರಸಿಲ್ಲಾ ಅವರಿಗೆ ಅನಾರೋಗ್ಯ ಕಾಡಿತು. ಪ್ರಸಿಲ್ಲಾ ಅವರು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾದರು.
ಆ ವೇಳೆ ಪ್ರಸಿಲ್ಲಾ ಅವರ ಮನೆಯಲ್ಲಿ ಅವರ ಅತ್ತೆ ರೇಣುಕಾ ಅವರು ವಾಸವಾಗಿದ್ದರು. ಗೆಳತಿ ಅವರು ಆಸ್ಪತ್ರೆಯಲ್ಲಿರುವ ವಿಷಯ ಅರಿತ ಪ್ರೇಮಕುಮಾರಿ ಅವರು ಪ್ರಸಿಲ್ಲಾ ಅವರ ಮನೆಗೆ ಬಂದರು. ರೇಣುಕಾ ಅವರನ್ನು ಯಾಮಾರಿಸಿ ಮನೆ ಒಳಗೆ ಪ್ರವೇಶಿಸಿದರು. ಆ ಮನೆಯಲ್ಲಿದ್ದ 60 ಸಾವಿರ ರೂ ಮೌಲ್ಯದ ಬಂಗಾರದ ಚೈನ್, 10 ಸಾವಿರ ರೂ ಮೌಲ್ಯದ ಕಾಲ್ಗೆಜ್ಜೆ ಜೊತೆ 500ರೂ ಹಣವನ್ನು ಕದ್ದರು.
ಪ್ರೇಮಕುಮಾರಿ ಅವರು ಕದ್ದಿರುವುದನ್ನು ಮರಳಿ ಕೊಡಬಹುದು ಎಂದು ಭಾವಿಸಿ ಪ್ರಸಿಲ್ಲಾ ಅವರು ಸುಮ್ಮನ್ನಿದ್ದರು. ಆದರೆ, ಅದನ್ನು ಮರಳಿಸುವಂತೆ ಸೂಚಿಸಿದರೂ ಪ್ರೇಮಕುಮಾರಿ ಅವರು ಕೊಡಲಿಲ್ಲ. ಹೀಗಾಗಿ ಪ್ರಸಿಲ್ಲಾ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರೇಮಕುಮಾರಿ ಅವರು ಮಾಡಿದ ಕಳ್ಳತನದ ವಿಷಯವನ್ನು ಬಹಿರಂಗಪಡಿಸಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.