`ಸರ್ವ ರೋಗಕ್ಕೂ ಸರಾಯಿ ಮದ್ದು’ ಎಂಬ ಶಿರ್ಷಿಕೆಯ ಅಡಿ `ಒಲ್ಡ್ಮಂಕ್ ಲವ್ವರ್’ ಎಂಬ ಇನಸ್ಟಾ ಗ್ರಾಂ ಖಾತೆ ಮೂಲಕ ಪೊಲೀಸರ ಭ್ರಷ್ಟಾಚಾರ ಬಯಲಿಗೆಳೆಯುತ್ತಿದ್ದ ಆದಿತ್ಯ ಗೌಡ ಅವರ ಕರ್ಮಕಾಂಡ ಹೊರಬಿದ್ದಿದೆ. 17 ಸಾವಿರಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ ಆದಿತ್ಯ ಗೌಡ ಅವರು ಮಹಿಳೆಯೊಬ್ಬರ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ. ಕುಡಿಯಲು ಹಣ ಕೊಡದಿದ್ದರೆ ವಿಡಿಯೋ ವೈರಲ್ ಮಾಡುವೆ ಎಂದು ಬೆದರಿಸಿ ಆದಿತ್ಯ ಗೌಡ ಅವರು ಮಹಿಳೆಯೊಬ್ಬರಿಂದ 4 ಸಾವಿರ ರೂ ದೋಚಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಲೇ ಪೊಲೀಸರ ವಿರುದ್ಧ ಅವರು ಮಾಡಿದ್ದ ಎಲ್ಲಾ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ!
ಕುಮಟಾ ಬಿಜ್ಜೂರಿನ ಆದಿತ್ಯ ಗೌಡ ಅವರು ಸಾಮಾಜಿಕ ಜಾಲತಾಣಗಳ ವಿಡಿಯೋದಿಂದ ಪ್ರಸಿದ್ಧಿಪಡೆದಿದ್ದಾರೆ. ಈಚೆಗೆ ಅವರು `ಗೋಕರ್ಣ ಪೊಲೀಸರ ಭ್ರಷ್ಟಾಚಾರ’ ಎಂಬ ಬರಹದ ಅಡಿ ಹಲವು ವಿಡಿಯೋಗಳನ್ನು ಮಾಡಿದ್ದಾರೆ. ಆದರೆ, ಯಾವ ವಿಡಿಯೋಗೂ ಅವರು ದಾಖಲೆಗಳನ್ನು ಒದಗಿಸಿಲ್ಲ. ಜೀವದ ಆಸೆ ಬಿಟ್ಟು ಈ ವಿಡಿಯೋ ಮಾಡಿರುವುದಾಗಿ ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಈ ಎಲ್ಲದರ ನಡುವೆ ಆದಿತ್ಯ ಗೌಡ ಅವರ ವಿರುದ್ಧವೇ ಮಹಿಳೆಯೊಬ್ಬರು ಅಸಭ್ಯ ವರ್ತನೆಯ ಆರೋಪ ಮಾಡಿದ್ದಾರೆ. ಚೌಡಗೇರಿಯ ಶಾರದಾ ಜಟ್ಟು ಗೌಡ ಅವರು ಆದಿತ್ಯ ಗೌಡ ಅವರ ವರ್ತನೆಯಿಂದ ಬೇಸತ್ತು ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಶಾರದಾ ಗೌಡ ಅವರು ಗಂಜಿಗದ್ದೆಯಲ್ಲಿ `ಅಪರಾಜಿತ ಬೈಕ್ ರೆಂಟಲ್’ ಎಂಬ ಮಳಿಗೆ ನಡೆಸುತ್ತಿದ್ದು, ಆದಿತ್ಯ ಗೌಡ ಅವರು ಆರು ತಿಂಗಳ ಹಿಂದೆ ಅಲ್ಲಿಂದ ಬೈಕ್ ಬಾಡಿಗೆಗೆ ಪಡೆದಿದ್ದರು. ಆದರೆ, ಬಾಡಿಗೆ ಹಣ ಪಾವತಿಸಿರಲಿಲ್ಲ. ಬೈಕನ್ನು ಸಹ ಮರಳಿಸಿರಲಿಲ್ಲ. ಸಾಕಷ್ಟು ಬಾರಿ ಬೈಕ್ ಹಾಗೂ ಬಾಡಿಗೆ ಕೊಡುವಂತೆ ಕೇಳಿದರೂ ಅದಕ್ಕೆ ಆದಿತ್ಯ ಗೌಡ ಅವರು ಸ್ಪಂದಿಸುತ್ತಿರಲಿಲ್ಲ. `ನೀ ಯಾರು ಎಂದೇ ಗೊತ್ತಿಲ್ಲ’ ಎಂದಿದ್ದ ಆದಿತ್ಯ ಗೌಡ ಅವರು ಕೊನೆಗೆ `ಬಾಡಿಗೆ ಹಣ ಕೇಳಿದರೆ ಸೋಶಿಯಲ್ ಮಿಡಿಯಾದಲ್ಲಿ ಕೆಟ್ಟದಾಗಿ ವಿಡಿಯೋ ಹಾಕುವೆ’ ಎಂದು ಬೆದರಿಸಿದ್ದರು. ಆ ಬೆದರಿಕೆಗೆ ಬಗ್ಗಿದ ಶಾರದಾ ಗೌಡ ಅವರು `ಬಾಡಿಗೆ ಹಣ ಬೇಡ. ಬೈಕನ್ನಾದರೂ ಕೊಡು’ ಎಂದು ದುಂಬಾಲು ಬಿದ್ದಿದ್ದರು. ಆಗ, ಆದಿತ್ಯ ಗೌಡ ಅವರು `ಸರಾಯಿ ಕುಡಿದು ಬೈಕ್ ಓಡಿಸುವಾಗ ಪೊಲೀಸರು ಹಿಡಿದಿದ್ದಾರೆ. ಡ್ರಿಂಕ್ & ಡ್ರೆöÊವ್ ಕೇಸ್ ಹಾಕಿದ್ದಾರೆ. ಪೊಲೀಸರ ಬಳಿ ಬೈಕ್ ಇದೆ’ ಎಂಬ ವಿಷಯ ಬಾಯ್ಬಿಟ್ಟಿದ್ದರು. `ಆ ಕೇಸಿಗೆ ಸಂಬAಧಿಸಿ ಕೋರ್ಟಿಗೆ ಹಣ ಕಟ್ಟಬೇಕು. ಆ ಹಣ ನೀವು ಕೊಡಬೇಕು. ಇಲ್ಲವಾದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ನಿಮ್ಮ ಕುಟುಂಬದ ವಿರುದ್ಧ ಕೆಟ್ಟದಾಗಿ ಹಾಕುವೆ’ ಎಂದು ಬೆದರಿಕೆ ಒಡ್ಡಿದ್ದರು.
ಬೈಕ್ ಬಿಡಿಸಿಕೊಳ್ಳುವುದಕ್ಕಾಗಿ ಶಾರದಾ ಗೌಡ ಅವರು 12 ಸಾವಿರ ರೂ ಕೊಟ್ಟಿದ್ದರು. ಅದಾದ ನಂತರ `ಕೋರ್ಟಿಗೆ ಹೋಗಲು ಕಾರು ಮಾಡಿಕೊಡಿ’ ಎಂದು ಆದಿತ್ಯ ಗೌಡ ಅವರು ದುಂಬಾಲು ಬಿದ್ದಿದ್ದು, ಬಾಡಿಗೆ ಕಾರಿನ ಮೂಲಕ ಆದಿತ್ಯ ಗೌಡ ಅವರನ್ನು ಕೋರ್ಟಿಗೆ ಕಳುಹಿಸಿಕೊಟ್ಟಿದ್ದರು. ದಂಡ ಕಟ್ಟಿ ಬೈಕ್ ಬಿಡಿಸಿಕೊಂಡು ಬಂದ ನಂತರವೂ ಆದಿತ್ಯ ಗೌಡ ಅವರ ಕಾಟ ಕಡಿಮೆ ಆಗಿರಲಿಲ್ಲ. ಸರಾಯಿ ಕುಡಿದು ಅಂಗಡಿ ಬಳಿ ಬರುತ್ತಿದ್ದ ಆದಿತ್ಯ ಗೌಡ ಅವರು ಪದೇ ಪದೇ ಬೈಕ್ ಒಡುವಂತೆ ಒತ್ತಾಯಿಸುತ್ತಿದ್ದರು. ಬೈಕ್ ಕೊಡದಿದ್ದರೆ ನಿಮ್ಮ ವಿಡಿಯೋ ವೈರಲ್ ಮಾಡುವೆ ಎಂದು ಬೆದರಿಸುತ್ತಿದ್ದರು. `ಕೊನೆಗೆ ಬೈಕ್ ಕೊಡದಿದ್ದರೂ ಪರವಾಗಿಲ್ಲ. ಸರಾಯಿ ಕುಡಿಯಲು 2 ಸಾವಿರ ರೂ ಕೊಡು’ ಎಂದು ಬೇಡಿದ್ದರು. ಆ ಹಣ ಕೊಡದ ಕಾರಣ ಶಾರದಾ ಗೌಡ ಅವರ ಕೈ ಹಿಡಿದು ಎಳೆದಾಡಿ, ಮೊಬೈಲಿನಲ್ಲಿ ವಿಡಿಯೋ ಮಾಡಿದ್ದರು. ಆ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಹಾಕುವುದಾಗಿ ಬೆದರಿಸಿ 4 ಬಾರಿ ತಲಾ ಒಂದು ಸಾವಿರ ರೂಪಾಯಿಗಳಂತೆ ವಸೂಲಿ ಮಾಡಿದ್ದರು.
ಅದೇ ವಿಡಿಯೋ ತೋರಿಸಿ ಮತ್ತೆ ಮತ್ತೆ ದುಡ್ಡು ಕೇಳಲು ಬರುತ್ತಿದ್ದ ಆದಿತ್ಯ ಗೌಡರ ಕಾಟಕ್ಕೆ ಶಾರದಾ ಗೌಡ ಅವರು ಬೇಸತ್ತಿದ್ದರು. `ತಮಗೆ ನ್ಯಾಯ ಕೊಡಿಸಿ’ ಎಂದು ಶಾರದಾ ಗೌಡ ಅವರು ಪೊಲೀಸರ ಮೊರೆ ಹೋಗಿದ್ದು, ಗೋಕರ್ಣ ಪಿಸೈ ಖಾದರ್ ಭಾಷಾ ಅವರು ಆದಿತ್ಯ ಗೌಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಲೇ ಆದಿತ್ಯ ಗೌಡ ಅವರು ಪೊಲೀಸರ ವಿರುದ್ಧ ಮಾಡಿದ್ದ ಎಲ್ಲಾ ವಿಡಿಯೋಗಳನ್ನು ದಿಢೀರ್ ಆಗಿ ಡಿಲಿಟ್ ಮಾಡಿದ್ದಾರೆ.