ದೇವಾಲಯದಲ್ಲಿ ಪೂಜೆ ಮಾಡುವ ವಿಷಯವಾಗಿ ಅರ್ಚಕರಿಬ್ಬರ ನಡುವೆ ಹೊಡೆದಾಟ ನಡೆದಿದೆ. ಆ ಅರ್ಚಕರು ಪೂಜೆಗೆ ತಂದಿದ್ದ ತೆಂಗಿನಕಾಯಿಯಿoದ ಹೊಡೆದಾಡಿಕೊಂಡಿದ್ದಾರೆ.
ದಾಂಡೇಲಿ ಬಳಿಯ ಕರ್ಕಾ ಚೆಕ್ ಪೋಸ್ಟಿನ ಬಳಿಯಿರುವ ದೊಂಬರಾಣಿ ದೇವಾಲಯದಲ್ಲಿ ಪೂಜೆ ಮಾಡುವ ವಿಷಯ ವಿವಾದಕ್ಕೆ ಕಾರಣವಾಗಿದೆ. ಅಲ್ಲಿ ಯಾರು ಪೂಜೆ ಮಾಡಬೇಕು? ಎನ್ನುವ ನಿಟ್ಟಿನಲ್ಲಿ ಗೊಂದಲ ಉಂಟಾಗಿದೆ. ಹಳಿಯಾಳದ ಹಂದಲಿಯ ಮಹಾದೇವ ಬಾಬು ಪಾಟೀಲ ಹಾಗೂ ಅದೇ ಊರಿನ ಹನುಮಂತ ಮಾದೇವ ಮಿರಾಶಿ ಅವರು ಪೂಜೆಯ ಹಕ್ಕಿಗಾಗಿ ಹೊಡೆದಾಟ ಮಾಡಿದ್ದಾರೆ.
ಡಿಸೆಂಬರ 26ರಂದು ಮಹಾದೇವ ಪಾಟೀಲ ಅವರು ಇಲ್ಲಿ ಪೂಜೆ ಮಾಡುತ್ತಿದ್ದರು. ಹೊರಗಿನ ಕಟ್ಟೆ ಮೇಲೆ ಕೂತಿದ್ದ ಹನುಮಂತ ಮಿರಾಶಿ ಅವರು ಇದರಿಂದ ಸಿಟ್ಟಾದರು. `ದೇವಸ್ಥಾನ ಕಟ್ಟಿದ್ದು ನಾವು. ಮೂರ್ತಿ ಸ್ಥಾಪನೆ ಮಾಡಿದ್ದು ನಾವು. ನಿನಗೆ ಇಲ್ಲಿ ಪೂಜೆ ಹಕ್ಕಿಲ್ಲ’ ಎಂದು ಹನುಮಂತ ಮಿರಾಶಿ ಅವರು ಕೂಗಾಟ ನಡೆಸಿದರು.
ಈ ವೇಳೆ ಮಹಾದೇವ ಪಾಟೀಲ್ ಅವರು ಪ್ರತಿ ಮಾತನಾಡಿದ್ದು ಜಗಳಕ್ಕೆ ಕಾರಣವಾಯಿತು. `ನೀನು ದೇವಾಲಯದ ದುಡ್ಡು ತಿಂದಿದ್ದೀಯ. ಇಲ್ಲಿ ನನಗೆ ಪೂಜೆ ಮಾಡಲು ನೇಮಿಸಿದ್ದಾರೆ’ ಎಂದು ಹನುಮಂತ ಮಿರಾಶಿ ಹೇಳಿದ್ದು, ಮಹಾದೇವ ಪಾಟೀಲ ಅವರ ಬೆನ್ನಿಗೆ ಗುದ್ದಿದರು. ಅದಾದ ನಂತರ ಅಲ್ಲಿದ್ದ ತೆಂಗಿನ ಕಾಯಿ ತೆಗೆದು ತಲೆಯ ಕಡೆ ಹೊಡೆದರು.
ಪರಿಣಾಮ ಮಹಾದೇವ ಪಾಟೀಲ ಅವರ ಮುಖಕ್ಕೆ ಕಾಯಿ ತಾಗಿ ಕಣ್ಣಿಗೆ ಪೆಟ್ಟಾಯಿತು. `ದೇವಾಲಯದ ಒಳಗೆ ಕಾಲಿಟ್ಟರೆ ಕೊಲೆ ಮಾಡುವೆ’ ಎಂದು ಹನುಮಂತ ಮಿರಾಶಿ ಬೆದರಿಸಿದ ಬಗ್ಗೆ ಮಹಾದೇವ ಪಾಟೀಲ ಅವರು ಪೊಲೀಸ್ ದೂರು ನೀಡಿದರು. ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.