ಕಾಡು ದಾರಿ ತಪ್ಪಿ ಊರಿಗೆ ಬಂದಿದ್ದ ಕಡವೆಯನ್ನು ಆ ಊರಿನ ಜನ ಪ್ರೀತಿಯಿಂದ ಸ್ವಾಗತಿಸಿದ್ದರು. ಚಿಕ್ಕ ಮಕ್ಕಳಿನಿಂದಹಿಡಿದು ವಯೋವೃದ್ಧರವರೆಗೂ ಎಲ್ಲರೂ ಕಡವೆಯನ್ನು ಮುದ್ದಿಸಿದ್ದರು. ಪುಟ್ಟ ಕಡವೆಗೆ ಮನೆಯಲ್ಲಿ ಮಾಡಿದ ತಿನಿಸುಗಳನ್ನು ಕೊಟ್ಟು ಸಲಹುತ್ತಿದ್ದರು. ಆದರೆ, ಬೆಳೆದು ದೊಡ್ಡದಾದ ಆ ಕಡವೆಯೇ ಇದೀಗ ಜನರ ನಿದ್ದೆಗೆಡಿಸಿದೆ!
Advertisement. Scroll to continue reading.
ಸಿದ್ದಾಪುರದ 16ನೇ ಮೈಲುಗಲ್ ಬಳಿ ಕೆಲ ವರ್ಷದ ಹಿಂದೆ ಕಡವೆ ಕಾಣಿಸಿತ್ತು. ಪುಟ್ಟ ಮರಿಯನ್ನು ನೋಡಿದ ಜನ ಆ ಕಡವೆಗೆ ಆರೈಕೆ ಮಾಡಿದ್ದರು. ಜನರ ಸ್ನೇಹ ಸಂಪಾದಿಸಿದ ಕಡವೆ ಅಲ್ಲಿನ ಮಕ್ಕಳ ಹಾಗೇ ಬೆಳೆಯಿತು. ಜನರ ಭಯವಿಲ್ಲದೇ ಎಲ್ಲಡೆ ಸಂಚರಿಸಲು ಶುರು ಮಾಡಿತು. ಅದೇ ಆ ಊರಿನವರಿಗೆ ದೊಡ್ಡ ತಲೆನೋವಾಗಿದೆ. ರೈತರ ಫಸಲುಗಳನ್ನು ಕಡವೆ ನಾಶ ಮಾಡುತ್ತಿದ್ದು, ಮನೆ ಮಕ್ಕಳು ಮುಂದೆ ಹೋದಾಗ ತನ್ನ ಕೋಡುಗಳಿಂದ ಹಾಯಲು ಬರುತ್ತಿದೆ!
ಈಗಾಲೇ ಅನೇಕರ ತೋಟಕ್ಕೆ ನುಗ್ಗಿದ ಆ ಕಡವೆ ಅಲ್ಲಿದ್ದ ಬಾಳೆ ಗಿಡಗಳನ್ನು ನಾಶ ಮಾಡಿದೆ. ಒಣಗಿದ ಅಡಿಕೆಯನ್ನು ಸಹ ಈ ಕಡವೆ ತಿನ್ನುತ್ತಿದ್ದು ಆ ಭಾಗದ ರೈತರ ತಲೆನೋವಿಗೆ ಕಾರಣವಾಗಿದೆ. ಚಿಕ್ಕ ಕಡಿವೆಯಾಗಿದ್ದಾಗ ಚಿಕ್ಕದಾಗಿದ್ದ ಕೋಡುಗಳು ಇದೀಗ ದೊಡ್ಡದಾಗಿ ಬೆಳೆದಿದ್ದು, ಆಗ ತಿಂಡಿ-ತಿನಿಸು ಕೊಟ್ಟು ಮುದ್ದಿಸಿದ ಮಹಿಳೆಯರೇ ಇದೀಗ ಕೋಡುಗಳನ್ನು ನೋಡಿ ಹೆದರುತ್ತಿದ್ದಾರೆ. ಹೀಗಾಗಿ ಆ ಕಡವೆಯ ವಿರುದ್ಧ ಊರಿನವರು ಸರ್ಕಾರಕ್ಕೆ ದೂರು ಕೊಟ್ಟಿದ್ದಾರೆ!
ಈ ಎಲ್ಲಾ ಹಿನ್ನಲೆ ಈ ಕಡವೆಯನ್ನು ಊರಿನಿಂದ ಹೊರಗೆ ಸಾಗಿಸಬೇಕು ಎಂದು ಜನ ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ. ಮೊದಲಿನ ಹಾಗೇ ಇದೀಗ ಕಡವೆ ಜನರ ಕೈಗೆ ಸಿಗುವುದು ಅಪರೂಪವಾಗಿದ್ದು, ತಜ್ಞರೇ ಆಗಮಿಸಿ ಅದಕ್ಕೆ ಬಲೆ ಬೀಸುವ ಸಂದಿಗ್ದತೆೆ ಸೃಷ್ಠಿಯಾಗಿದೆ. ಜನರ ಮನವಿ ಆಲಿಸಿದ ಅರಣ್ಯಾಧಿಕಾರಿಗಳು ಕಡವೆಯನ್ನು ಶಿವಮೊಗ್ಗಕ್ಕೆ ಕಳುಹಿಸುವ ಬಗ್ಗೆ ಚಿಂತಿಸಿದ್ದಾರೆ. ಇದಕ್ಕಾಗಿ ಸರ್ಕಾರಕ್ಕೆ ಅಧಿಕಾರಿಗಳು ಪತ್ರವನ್ನು ಬರೆದಿದ್ದಾರೆ. ಪಶು ತಜ್ಞರ ನೆರವುಪಡೆದು ಕಡವೆಯನ್ನು ಸ್ಥಳಾಂತರಿಸುವ ಚಿಂತನೆ ಮುಂದುವರೆದಿದೆ.
ಶಿವಮೊಗ್ಗಕ್ಕೆ ಕಳುಹಿಸಿದ ಕಾಟಿ ಸಾವು!
ಸಿದ್ದಾಪುರದ ಕಾನಸೂರು ಬಳಿಯ ಗವಿನಗುಡ್ಡದ ಅಡಿಕೆ ತೋಟದಲ್ಲಿದ್ದ ಕಾಡು ಕೋಣ ಶಿವಮೊಗ್ಗಕ್ಕೆ ಕಳುಹಿಸುವಾಗ ಸಾವನಪ್ಪಿದೆ. ಕಳೆದ ವಾರ ಕಾಡು ಕೋಣ ಕಾಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ಅರಣ್ಯ ಇಲಾಖೆಯವರು ರಕ್ಷಿಸುವ ಪ್ರಯತ್ನ ಮಾಡಿದ್ದರು. ಆಹಾರ ಸೇವಿಸಲಾಗದೇ ನರಳಾಡುತ್ತಿದ್ದ ಕಾಡು ಕೋಣಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಲಿಲ್ಲ. ಅದಾದ ನಂತರ ಕಾಡು ಕೋಣವನ್ನು ಶಿವಮೊಗ್ಗಕ್ಕೆ ಸಾಗಿಸುವ ಪ್ರಯತ್ನ ನಡೆದಿದ್ದು, ಅದು ಫಲ ಕೊಡದೇ ಸಾವನಪ್ಪಿದೆ.