1.5 ಲಕ್ಷ ರೂ ಮೌಲ್ಯದ ಚಿನ್ನದ ಸರದ ಜೊತೆ ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ರಮೇಶ ನಾಯ್ಕ ಅವರ ಮೇಲೆ ಕಳ್ಳರು ಕಣ್ಣಾಡಿಸಿದ್ದಾರೆ. ಅದರ ಪರಿಣಾಮ ಕರಾವಳಿ ಉತ್ಸವದ ಅವಧಿಯಲ್ಲಿ ಅವರ ಸರ ಕಣ್ಮರೆಯಾಗಿದೆ!
ಚಿಕ್ಕಮಗಳೂರಿನ ರಮೇಶ ನಾಯ್ಕ ಅವರು ಕಾರವಾರದಲ್ಲಿ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ಪೊಲೀಸ್ ವಸತಿಗೃಹದಲ್ಲಿ ವಾಸವಾಗಿರುವ ಅವರು ಡಿಸೆಂಬರ್ 27ರಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಕರ್ತವ್ಯದ ಅವಧಿ ಮುಗಿದ ನಂತರ ಸಂಜೆ ಕರಾವಳಿ ಉತ್ಸವ ನೋಡಲು ಹೋಗಿದ್ದರು. ಆ ದಿನ ಸಂಜೆ ಗೇಟ್ ನಂ 2ರಲ್ಲಿ ಭಾರೀ ಪ್ರಮಾಣದ ನೂಕು ನುಗ್ಗಲು ಉಂಟಾಗಿದ್ದು, ಇನ್ನಿತರ ಪೊಲೀಸ್ ಸಿಬ್ಬಂದಿ ಜೊತೆ ಅವರು ಮುನ್ನುಗ್ಗಲು ಪ್ರಯತ್ನಿಸಿದ್ದರು.
ರಾತ್ರಿ 8 ಗಂಟೆ ಅವಧಿಗೆ ರಮೇಶ ನಾಯ್ಕ ಅವರು ತಮ್ಮ ಜೇಬಿಗೆ ಕೈ ಹಾಕಿದರು. ಮನೆಯಿಂದ ಬರುವಾಗ ಆ ಜೇಬಿನಲ್ಲಿದ್ದ ಬಂಗಾರದ ಸರ ಕಾಣಲಿಲ್ಲ. 23 ಗ್ರಾಂ ತೂಕದ ಚಿನ್ನದ ಸರ ಕಾಣೆಯಾಗಿದ್ದರಿಂದ ಅವರು ಕಂಗಾಲಾದರು. ಅಲ್ಲಿದ್ದ ಸಾರ್ವಜನಿಕರನ್ನು ವಿಚಾರಿಸಿದರು. ಆದರೆ, ಬಂಗಾರದ ಸರ ಮಾತ್ರ ಸಿಗಲಿಲ್ಲ.
ಮನೆಯಲ್ಲಿಯೇ ಬಂಗಾರ ಬಿಟ್ಟು ಬಂದಿರುವ ಅನುಮಾನದ ಹಿನ್ನಲೆ ವಸತಿಗೃಹಕ್ಕೆ ತೆರಳಿದ ಅವರು ಅಲ್ಲಿಯೂ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಆದರೆ, ಅಲ್ಲಿಯೂ ಆ ಸರ ಕಾಣಲಿಲ್ಲ. ಕರಾವಳಿ ಉತ್ಸವದ ಅವಧಿಯಲ್ಲಿ ಚಿನ್ನ ಕಳೆದಿರುವ ಬಗ್ಗೆ ಅವರು ಕಾರವಾರ ನಗರಠಾಣೆಗೆ ದೂರು ನೀಡಿದ್ದು, ಕಳ್ಳನನ್ನು ಹುಡುಕಿ ಕೊಡುವಂತೆ ಅಲ್ಲಿನ ಪೊಲೀಸರಿಗೆ ಮನವಿ ಮಾಡಿದರು.