ಯಲ್ಲಾಪುರದ `ಮಹಾಗಣಪತಿ ಆಟೋ ವರ್ಕ’ ಗ್ಯಾರೇಜಿನಲ್ಲಿ ಗಲಾಟೆ ನಡೆದಿದೆ. ಅಲ್ಲಿದ್ದ ಸ್ಪಾನರ್-ರಾಡ್ ತೆಗೆದುಕೊಂಡು ಸತೀಶ ಹೆಗಡೆ ಹಾಗೂ ಗೋಪಾಲಕೃಷ್ಣ ಭಟ್ಟ ಹೊಡೆದಾಡಿಕೊಂಡಿದ್ದಾರೆ.
ಯಲ್ಲಾಪುರದ ಉಮ್ಮಚ್ಗಿ ಬಳಿಯ ಕುಂದರಗಿ ಸಮೀಪದ ಹಿತ್ಲಳ್ಳಿ ಹೀರೆಸರದಲ್ಲಿ ಸತೀಶ ನಾರಾಯಣ ಹೆಗಡೆ ಅವರು ವಾಸವಾಗಿದ್ದಾರೆ. ಅದೇ ಭಾಗದ ತೋಟದ ಕಲ್ಲಳ್ಳಿಯ ಗೋಪಾಲಕೃಷ್ಣ ಉದಯ ಭಟ್ಟ ಅವರು ವಾಸವಾಗಿದ್ದಾರೆ. ಸತೀಶ ಹೆಗಡೆ ಅವರು ಕೃಷಿಕರಾಗಿದ್ದು, ಗೋಪಾಲಕೃಷ್ಣ ಭಟ್ಟ ಅವರು ಉಮ್ಮಚ್ಗಿಯ ಮಹಾಗಣಪತಿ ಆಟೋ ವರ್ಕನಲ್ಲಿ ಕೆಲಸ ಮಾಡುತ್ತಾರೆ. ಸತೀಶ ಹೆಗಡೆ ಹಾಗೂ ಗೋಪಾಲಕೃಷ್ಣ ಭಟ್ಟ ಸಂಬoಧಿಕರಾಗಿದ್ದಾರೆ. ಆದರೆ, ಅವರಿಬ್ಬರ ನಡುವೆ ಆಸ್ತಿ ವಿಷಯವಾಗಿ ಕಲಹ ನಡೆಯುತ್ತಿದೆ. ಅದೇ ಅವರಿಬ್ಬರ ನಡುವಿನ ವೈಮನಸ್ಸಿಗೂ ಕಾರಣವಾಗಿದೆ. ಆ ದ್ವೇಷದ ಮುಂದುವರೆದ ಭಾಗವಾಗಿ ಜನವರಿ 14ರಂದು ಅವರಿಬ್ಬರು ಪರಸ್ಪರ ಹೊಡೆದಾಟ ನಡೆಸಿದ್ದಾರೆ.
ಸತೀಶ ಹೆಗಡೆ ಅವರ ಜಮೀನು ವಿಷಯವಾಗಿ ಗೋಪಾಲಕೃಷ್ಣ ಭಟ್ಟರು ತಂಟೆ-ತಕರಾರು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮೊನ್ನೆ ಗೋಪಾಲಕೃಷ್ಣರ ಭಟ್ಟರ ತಂದೆ ಉದಯ ಭಟ್ಟರ ಮೇಲೆ ಸತೀಶ ಹೆಗಡೆ ಅವರು ಕಳ್ಳತನದ ಆರೋಪ ಮಾಡಿದ್ದಾರೆ. ಅದೇ ಊರಿನ ವಿನಾಯಕ ಎಂಬಾತರ ಮುಂದೆ ಸತೀಶ ಹೆಗಡೆ ಅವರು `ಉದಯ ಭಟ್ಟರು ಬಟ್ಟೆ ಕಳ್ಳತನ ಮಾಡಿದ್ದಾರೆ. ಹಂಚುಗಳನ್ನು ಸಹ ಕದ್ದಿದ್ದಾರೆ’ ಎಂದು ಹೇಳಿದ್ದಾರೆ. ಆ ವಿಷಯವನ್ನು ಅಲ್ಲಿಗೆ ಬಿಡದ ವಿನಾಯಕ ಅವರು ಗೋಪಾಲಕೃಷ್ಣ ಭಟ್ಟರಿಗೆ ಸುದ್ದಿ ಮುಟ್ಟಿಸಿದ್ದಾರೆ. ಹೀಗಾಗಿ ಅವರಿಬ್ಬರ ನಡುವಿನ ದ್ವೇಷ ಇನ್ನಷ್ಟು ಹೆಚ್ಚಾಗಿದೆ.
ಬುಧವಾರ ಬೆಳಗ್ಗೆ ಸತೀಶ ಹೆಗಡೆ ಅವರು ಜೋಳದ ಹಿಟ್ಟು ಮಾಡಿಸಲು ಉಮ್ಮಚ್ಗಿಗೆ ಬಂದಿದ್ದರು. ಅವರ ಬೈಕಿನ ಟೈಯರ್’ಗೆ ಗಾಳಿ ಕಡಿಮೆ ಇದ್ದ ಕಾರಣ ಮಹಾಗಣಪತಿ ಆಟೋ ವರ್ಕ ಗ್ಯಾರೇಜಿಗೆ ಹೋಗಿದ್ದರು. ಅಲ್ಲಿ ಸತೀಶ ಹೆಗಡೆ ಅವರನ್ನು ನೋಡಿದ ಗೋಪಾಲಕೃಷ್ಣ ಭಟ್ಟ `ನೀ ಯಾಕೆ ಈ ಗ್ಯಾರೇಜಿಗೆ ಬಂದೆ?’ ಎಂದು ಪ್ರಶ್ನಿಸಿದರು. `ಬಟ್ಟೆ ಹಾಗೂ ಹಂಚು ಕಳ್ಳತನ ಮಾಡಿದವ’ ಎಂದು ಊರ ತುಂಬ ಸುದ್ದಿ ಮಾಡಿದ ವಿಷಯ ಪ್ರಸ್ತಾಪಿಸಿದರು. ಈ ವೇಳೆ ಅವರಿಬ್ಬರ ನಡುವೆ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪಪಡೆಯಿತು.
ಗ್ಯಾರೇಜಿನಲ್ಲಿದ್ದ ಸೈಕಲ್ ಸೇಪ್ಟಿ ಗಾರ್ಡಿನಿಂದ ಗೋಪಾಲಕೃಷ್ಣ ಭಟ್ಟರು ಸತೀಶ ಹೆಗಡೆ ಅವರಿಗೆ ಹೊಡೆದರು. ಅಲ್ಲಿಯೇ ಇದ್ದ ಕಬ್ಬಿಣದ ಸ್ಪಾನರಿನಿಂದ ಸತೀಶ ಹೆಗಡೆ ಅವರು ಗೋಪಾಲಕೃಷ್ಣ ಭಟ್ಟ ಅವರಿಗೆ ಬಾರಿಸಿದರು. ಸತೀಶ ಹೆಗಡೆ ಅವರ ತಲೆ ಹಾಗೂ ಎಡಬುಜಕ್ಕೆ ಭಾರೀ ಪ್ರಮಾಣದಲ್ಲಿ ನೋವಾಗಿದ್ದು, ಅವರು ಯಲ್ಲಾಪುರ ಆಸ್ಪತ್ರೆ ಸೇರಿದರು. ಗೋಪಾಲಕೃಷ್ಣ ಭಟ್ಟರ ದವಡೆ ಹಾಗೂ ಮೂಗಿಗೆ ಗಾಯವಾಗಿ ರಕ್ತ ಬಂದಿದ್ದು, ಅವರು ಸಹ ಚಿಕಿತ್ಸೆಗೆ ಒಳಗಾದರು. ಈ ಹೊಡೆದಾಟದ ವಿಷಯ ಕೇಳಿ ಯಲ್ಲಾಪುರ ಪಿಐ ರಮೇಶ ಹಾನಾಪುರ, ಪಿಸೈ ಶೇಡ್ ಜಿ ಚೌಹಾಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅವರಿಬ್ಬರ ಮಾತು ಆಲಿಸಿದ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಶುರು ಮಾಡಿದ್ದಾರೆ.