ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿ ಆಲೆಮನೆ ಉತ್ಸವ ನಡೆಯುತ್ತಿದ್ದು, ಈ ಬಾರಿ ಪುಂಡ-ಪೋಕರಿಗಳ ಹಾವಳಿ ಜೋರಾಗಿದೆ. ಆಲೆಮನೆಗೆ ಬರುವ ಯುವತಿಯರನ್ನು ಚುಡಾಯಿಸುವುದಕ್ಕಾಗಿಯೇ ಕೆಲ ಗುಂಪುಗಳು ಲಗ್ಗೆಯಿಟ್ಟಿದ್ದು, ಇಲ್ಲಿರುವ ಪುಂಡರ ಕಾಟಕ್ಕೆ ಮಹಿಳೆಯರು ಬೇಸತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರೋಟರಿ ಆಲೆಮನೆ ಉತ್ಸವ ಅಚ್ಚುಕಟ್ಟಾಗಿ ನಡೆಯುತ್ತಿದೆ. ಹೀಗಾಗಿ ಆ ಉತ್ಸವಕ್ಕೆ ಅಪಾರ ಜನ ಮನ್ನಣೆಯೂ ಸಿಕ್ಕಿದೆ. ನಗರದಲ್ಲಿ ಹಳ್ಳಿಯ ವಾತಾವರಣ ಸೃಷ್ಠಿಸುವ ಕಾರ್ಯ ರೋಟರಿ ಸಂಸ್ಥೆಯಿoದ ನಡೆದಿದೆ. ಆದರೆ, ಈ ಬಾರಿ ಅನೇಕ ಲೋಪಗಳಾಗಿದ್ದು, ಆ ಲೋಪಗಳನ್ನು ಪಡ್ಡೆ ಹುಡುಗರು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಾರಿಯೂ ಜನ ಪ್ರವೇಶ ಶುಲ್ಕ ಪಾವತಿಸಿ ಜನ ಆಲೆಮನೆ ಉತ್ಸವಕ್ಕೆ ಬಂದಿದ್ದಾರೆ. ಕಬ್ಬಿನ ಹಾಲಿನ ಜೊತೆ ಅಲ್ಲಿನ ಮನರಂಜನಾ ಕಾರ್ಯಕ್ರಮವನ್ನು ಆಹ್ವಾದಿಸುತ್ತಿದ್ದಾರೆ. ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕೊಟ್ಟಿರುವ ಕಾರಣ ವೇದಿಕೆಯಲ್ಲಿನ ಕಲಾವಿದರ ಜೊತೆ ಅವರ ಬಂಧು-ಮಿತ್ರರು ಸಹ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಮಹಿಳೆಯರನ್ನೇ ಗುರಿಯಾಗಿರಿಸಿಕೊಂಡು ಹಿಂಸೆ ನೀಡುವ ಕೆಲಸ ಅಲ್ಲಿ ನಡೆಯುತ್ತಿದೆ. ಕಿಡಿಗೇಡಿಗಳ ಕಾಟಕ್ಕೆ ಬೇಸತ್ತ ಜನ ಅಸಮಧಾನವ್ಯಕ್ತಪಡಿಸಿದ್ದಾರೆ.
ಉತ್ಸವಕ್ಕೆ ಅಗತ್ಯ ಭದ್ರತಾ ವ್ಯವಸ್ಥೆ ಕಾಣಲಿಲ್ಲ. ಆರಂಭದಲ್ಲಿ ಜನ ಕೊರತೆ ಎದ್ದು ತೋರಿದರೂ ಶನಿವಾರ ಹಾಗೂ ಭಾನುವಾರ ಅನೇಕರಿಗೆ ಸ್ಥಳಾವಕಾಶ ಸಿಗಲಿಲ್ಲ. ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುವಾಗಲೇ ಕಿಡಿಗೇಡಿಗಳು ಮಹಿಳೆಯೊಬ್ಬರ ಮೈ ಮುಟ್ಟಿದ ಪ್ರಕರಣವೂ ನಡೆದಿದ್ದು, ಅಂಥಹುದನ್ನು ತಡೆಯಲು ಉತ್ಸವದ ಪ್ರವೇಶ ದ್ವಾರದಲ್ಲಿ ಇಬ್ಬರು ವಾಚಮೆನ್ ಹೊರತುಪಡಿಸಿ ಬೇರೆ ಭದ್ರತಾ ಸಿಬ್ಬಂದಿ ಕಾಣಲಿಲ್ಲ. ಪೊಲೀಸರು ಇಲ್ಲದಿರುವುದನ್ನು ಗಮನಿಸಿದ ಪುಂಡರು ನಿತ್ಯವೂ ಮಹಿಳೆಯರನ್ನು ಪೀಡಿಸುತ್ತಿದ್ದು, ಯುವತಿಯನ್ನು ಚುಡಾಯಿಸುವವರ ಸಂಖ್ಯೆ ಕಡಿಮೆಯಿರಲಿಲ್ಲ. ಉತ್ಸವ ನಡೆಯುವ ಸ್ಥಳದಲ್ಲಿ ಪುಂಡರ ಹಾವಳಿ ಬಗ್ಗೆ ಸಂತ್ರಸ್ತೆ ತಮ್ಮ ಸ್ನೇಹಿತರಿಗೆ ತಿಳಿಸಿದ್ದು, ಉತ್ಸವ ಮುಗಿದ ನಂತರ ಪುಂಡರ ಮೇಲೆ ಕೆಲವರು ಕೈ ಮಾಡಿದ್ದಾರೆ. ಈ ವೇಳೆ ಆ ಪಡ್ಡೆ ಹುಡುಗರು ಸಹ ಗಲಾಟೆ ಮಾಡಿದ್ದು, ಉತ್ಸವದ ಪ್ರವೇಶ ದ್ವಾರದ ಎದುರೇ ಮಾರಾಮಾರಿ ನಡೆದರೂ ಆಯೋಜಕರು ಅದನ್ನು ಪ್ರಶ್ನಿಸಿಲ್ಲ. ತಡೆಯುವ ಪ್ರಯತ್ನವನ್ನು ಮಾಡಿಲ್ಲ.
ಇನ್ನೂ ಈ ವರ್ಷದ ಆಲೆಮನೆ ಉತ್ಸವದಲ್ಲಿ ಮೊದಲಿನ ಅಚ್ಚುಕಟ್ಟಾದ ವ್ಯವಸ್ಥೆ ಕಾಣಲಿಲ್ಲ. ಉತ್ಸವಕ್ಕೆ ಬಂದ ಸಾರ್ವಜನಿಕರು ವಿಕಾಸಾಶ್ರಮದ ಎದುರಿನ ಹೆದ್ದಾರಿಯಲ್ಲೇ ಸಾಲಾಗಿ ವಾಹನಗಳನ್ನು ನಿಲ್ಲಿಸಿದ್ದು, ಇದರಿಂದ ಸಂಚಾರ ಸಮಸ್ಯೆಯಾಯಿತು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರಿಂದ ನಗರಸಭೆ ಸಿಬ್ಬಂದಿಯೂ ಪರದಾಡಿದರು. ಜೊತೆಗೆ ಪದೇ ಪದೆ ಮೈಕ್ನಲ್ಲಿ `ಇಂಥ ವಾಹನ ರಸ್ತೆಗೆ ಅಡ್ಡಲಾಗಿದ್ದು, ಕೂಡಲೇ ತೆರವು ಮಾಡಿ’ ಎನ್ನುವ ಸಂದೇಶ ಜನರಿಗೆ ಬೇಸರ ತರಿಸಿತು.