ರಫೀಕ್ ಹಾಗೂ ರಂಜಿತಾ ನಿತ್ಯವೂ ಫೋನಿನಲ್ಲಿ ಮಾತನಾಡುತ್ತಿದ್ದು, ರಫೀಕ್ ಜೊತೆ ಮಾತು ಬಿಟ್ಟಿರುವುದೇ ಕೊಲೆಗೆ ಕಾರಣ ಎಂಬ ಸಂಗತಿ ಹೊರಬಿದ್ದಿದೆ.
ಯಲ್ಲಾಪುರದ ಆಶ್ರಯ ಕಾಲೋನಿ ಬಳಿ ವಾಸವಾಗಿರುವ ರಂಜಿತಾ ಬನಸೋಡೆ ಅವರು 12 ವರ್ಷದ ಹಿಂದೆ ಸೊಲ್ಲಾಪುರದ ಸಚೀನ್ ಕಾಟೇರ್ ಅವರನ್ನು ಮದುವೆ ಆಗಿದ್ದರು. ಅವರ ದಾಂಪತ್ಯಕ್ಕೆ ಮಗು ಹುಟ್ಟಿದ್ದು, ಆ ಮುಗುವಿಗೆ ಐದು ವರ್ಷವಾದಾಗ ರಂಜಿತಾ ಅವರು ಸಚೀನ್ ಅವರಿಂದ ದೂರವಾಗಿದ್ದರು. ಅದಾದ ನಂತರ ವಿವಾಹ ವಿಚ್ಚೇದನವನ್ನುಪಡೆದಿದ್ದರು.
ಈ ನಡುವೆ ರಂಜಿತಾ ಅವರು ರಾಮಾಪುರ ಶಾಲೆಯ ಬಿಸಿಯೂಟ ಸಿಬ್ಬಂದಿ ಆಗಿ ನೇಮಕವಾದರು. ಅಡುಗೆ ಸಹಾಯಕಿ ಆಗಿ ಅವರು ಕೆಲಸ ಮಾಡಿಕೊಂಡಿದ್ದರು. ಆ ಅವಧಿಯಲ್ಲಿಯೇ ಕಾಳಮ್ಮ ನಗರದ ಬಾಲ್ಯದ ಗೆಳೆಯ ರಫೀಕ್ ಇಮಾಮಸಾಬ್ ಯಳ್ಳೂರು ಅವರು ರಂಜಿತಾ ಬನಸೋಡೆ ಅವರ ಸಂಪರ್ಕಕ್ಕೆ ಬಂದರು. ರಫೀಕ್ ಅವರು ರಂಜಿತಾ ಅವರ ಕ್ಲಾಸ್‌ಮೇಟ್ ಆಗಿದ್ದು, ರಂಜಿತಾ ಅವರ ವಿವಾಹ ವಿಚ್ಚೇದನವನ್ನು ರಫೀಕ್ ಅರಿತಿದ್ದರು. ರಂಜಿತಾ ಅವರು ಪ್ರತಿ ದಿನ ಬೆಳಗ್ಗೆ 9 ಗಂಟೆಗೆ ಶಾಲೆಯ ಅಡುಗೆ ಕೆಲಸಕ್ಕೆ ಹೋಗುವುದು ರಫೀಕ್ ಅವರಿಗೆ ಗೊತ್ತಿತ್ತು. ಮಧ್ಯಾಹ್ನ ಮನೆಗೆ ಬರುವ ಸಮಯ ಸಹ ರಫೀಕ್ ಅವರಿಗೆ ತಿಳಿದಿತ್ತು.
ರಂಚಿತಾ ಅವರ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದ ರಫೀಕ್ ಪ್ರೀತಿ ಮಾಡುವಂತೆ ದುಂಬಾಲು ಬಿದ್ದಿದ್ದರು. ರಂಜಿತಾ ಅವರು ಸಹ ರಫೀಕ್ ಅವರ ಪ್ರೀತಿಗೆ ಬಿದ್ದಿದ್ದು, ರಂಜಿತಾ ಅವರ ಮನೆಗೆ ಸಹ ರಫೀಕ್ ಆಗಾಗ ಭೇಟಿ ನೀಡುತ್ತಿದ್ದರು. ಆದರೆ, ಮದುವೆ ವಿಷಯದಲ್ಲಿ ಈಗಾಗಲೇ ಕೆಟ್ಟ ಅನುಭವಹೊಂದಿದ್ದ ರಂಜಿತಾ ಮತ್ತೊಂದು ಮದುವೆಗೆ ಆಸಕ್ತಿವಹಿಸಿರಲಿಲ್ಲ. ಹೀಗಾಗಿ ರಂಜಿತಾ ಅವರಿಗೆ ರಫೀಕ್ ಅವರನ್ನು ಮದುವೆ ಆಗಲು ಇಷ್ಟವಿರಲಿಲ್ಲ. `ಮದುವೆ ಆಗುವುದು ಬೇಡ’ ಎಂದರೂ ರಫೀಕ್ ಸುಮ್ಮನೆ ಇರುತ್ತಿರಲಿಲ್ಲ.
ಪದೇ ಪದೇ ರಂಜಿತಾಗೆ ಫೋನ್ ಮಾಡುತ್ತಿದ್ದ ರಫೀಕ್ `ಮದುವೆ ಆಗೋಣ.. ಮೀಟ್ ಆಗೋಣ’ ಎನ್ನುತ್ತಿದ್ದರು. ದೀಪಾವಳಿ ಹಬ್ಬದ ಅವಧಿಯಲ್ಲಿ ಈ ವಿಷಯವನ್ನು ರಂಜಿತಾ ಅವರು ತಮ್ಮ ಸಹೋದರಿ ಅಕ್ಷತಾ ಅವರ ಬಳಿ ಹೇಳಿದ್ದು, ಅಕ್ಷತಾ ಅವರು ಸಹ ರಫೀಕ್ ಅವರನ್ನು ಕರೆದು ಮಾತನಾಡಿದ್ದರು. `ಅಕ್ಕನಿಗೆ ಹಿಂಸೆ ಕೊಡಬೇಡ’ ಎಂದು ಅಕ್ಷತಾ ಬೈದು ಕಳುಹಿಸಿದ್ದರು. `ರಫೀಕ್ ಜೊತೆ ಮಾತನಾಡಬೇಡ’ ಎಂದು ಅಕ್ಷತಾ ಸಹ ಅಕ್ಕನಿಗೆ ಬುದ್ದಿ ಹೇಳಿದ್ದರು. ಅದಾದ ನಂತರ ರಫೀಕ್ ಮನೆ ಕಡೆ ಬರುವುದನ್ನು ಬಿಟ್ಟಿದ್ದರು.
ಏಕಾಏಕಿ ರಂಜಿತಾ ಮಾತು ಬಿಟ್ಟ ಕಾರಣ ರಫೀಕ್ ಸಿಟ್ಟಾಗಿದ್ದರು. ಶನಿವಾರ ಮಧ್ಯಾಹ್ನ ರಂಜಿತಾ ಶಾಲೆಯಿಂದ ಮನೆಗೆ ಬರುವಾಗ ರಫೀಕ್ ಅಡ್ಡಗಟ್ಟಿದರು. ಅಲ್ಲಿ ವಾಗ್ವಾದ ನಡೆದಿದ್ದು, ರಫೀಕ್ ಮೊನಚಾದ ಚಾಕುವಿನಿಂದ ರಂಜಿತಾರ ಕತ್ತಿಗೆ ಚುಚ್ಚಿದರು. ಅದೇ ನೋವಿನಲ್ಲಿ ರಂಜಿತಾ ಕೊನೆಯುಸಿರೆಳೆದರು. ಈ ಎಲ್ಲಾ ವಿಷಯವನ್ನು ರಂಜಿತಾರ ಸಹೋದರಿ ರಕ್ಷತಾ ಅವರು ಪೊಲೀಸರಿಗೆ ವಿವರಿಸಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.