ಹೊನ್ನಾವರದ ಸೂಳೇಮುರ್ಕಿ ತಿರುವಿನಲ್ಲಿ ಪದೇ ಪದೇ ಅಪಘಾತವಾಗುತ್ತಿರುವುದನ್ನು ಅರಿತ ಸಿದ್ದಾಪುರದ ಪ್ರಮೋದ ನಾಯ್ಕ ತಮ್ಮ ಸ್ನೇಹಿತರಿಬ್ಬರನ್ನು ಅಲ್ಲಿಯೇ ಕೊಲೆ ಮಾಡಿದ್ದಾರೆ. ಕುಡಗುಂದದ ಆಲಳ್ಳಿಯಲ್ಲಿ ಮೀನು ಮಾರಾಟ ಮಾಡಿಕೊಂಡಿದ್ದ ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲರ್ ಅವರನ್ನು ಕೊಂದ ಪ್ರಮೋದ ನಾಯ್ಕ ಜೈಲು ಸೇರಿದ್ದಾರೆ.
ಹೊನ್ನಾವರದ ಸೂಳೆಮುರ್ಕಿ ತಿರುವಿನಲ್ಲಿ ಜನವರಿ 7ರಂದು ಕಾರೊಂದು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿತ್ತು. ಆ ಕಾರಿನಲ್ಲಿ ಇಬ್ಬರ ದಹನವಾಗಿದ್ದು, ಅವರಿಬ್ಬರು ಸುಡುವ ಮುನ್ನವೇ ಶವವಾಗಿದ್ದರು. ಮಂಜುನಾಥ ಹಸ್ಲರ್ ಹಾಗೂ ಚಂದ್ರಶೇಖರ ಹಸ್ಲರ್ ಅವರಿಗೆ ಸರಾಯಿ ಕುಡಿಸಿದ್ದ ಪ್ರಮೋದ ನಾಯ್ಕ ಆ ಸರಾಯಿಯಲ್ಲಿ ವಿಷ ಹಾಕಿದ್ದರು. ವಿಷ ಸೇವನೆಯಿಂದ ಸಾವನಪ್ಪಿದ ಆ ಸಹೋದರರನ್ನು ಕಾರಿನಲ್ಲಿ ಕೂರಿಸಿ ಕಾರಿಗೆ ಬೆಂಕಿ ಹಚ್ಚಿದ್ದರು. ಈ ಕೃತ್ಯದಲ್ಲಿ ಪ್ರಮೋದ ನಾಯ್ಕ ಅವರಿಗೆ ಮತ್ತಿಬ್ಬರು ಸಹಾಯ ಮಾಡಿದ್ದು, ಕಾರಿಗೆ ಬೆಂಕಿ ಬಿದ್ದ ನಂತರ ಆ ಎಲ್ಲರೂ ಊರು ಬಿಟ್ಟಿದ್ದರು.
ಪ್ರಮೋದ ನಾಯ್ಕ ನಾಪತ್ತೆ ಆಗಿರುವುದು ಅನೇಕರಿಗೆ ಅನುಮಾನ ಹುಟ್ಟಿಸಿತ್ತು. ಪ್ರಕರಣದ ಸಮಗ್ರ ತನಿಖೆಗಾಗಿ ಪ್ರತಿಭಟನೆಗಳು ಶುರುವಾಗಿತ್ತು. ಮೊದಲು ಅಪಘಾತ ಎಂದು ಪ್ರಕರಣ ದಾಖಲಿಸಿದ್ದ ಸಹೋದರರ ಸಹೋದರ ಉಮೇಶ ಹಸ್ಲರ್ ಅದಾದ ನಂತರ ಪ್ರಮೋದ ನಾಯ್ಕರ ಮೇಲೆ ಅನುಮಾನವಿರುವ ಬಗ್ಗೆ ದೂರಿದ್ದರು. ತನಿಖೆ ನಡೆಸಿದ ಪೊಲೀಸರು ಅಡಗಿದ್ದ ಪ್ರಮೋದ ನಾಯ್ಕ ಹಾಗೂ ಸಹಚರರನ್ನು ಬಂಧಿಸಿದರು. ವಿಚಾರಣೆ ವೇಳೆ ಸಾವನಪ್ಪಿದ ಸಹೋದರರು ಹಾಗೂ ಪ್ರಮೋದ ನಾಯ್ಕ ನಡುವೆ ಹಣಕಾಸಿನ ವ್ಯವಹಾರವಿದ್ದು, ಹಣಕ್ಕಾಗಿಯೇ ಪ್ರಮೋದ ನಾಯ್ಕ ಆ ಇಬ್ಬರನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.