ಸಿದ್ದಾಪುರದ ನಿರಂಜನ ಹೆಗಡೆ ಅವರು ತೋಟದ ಸುತ್ತ ನಿರ್ಮಿಸಿದ್ದ ಬೇಲಿಯನ್ನು ನರಸಿಂಹ ಹೆಗಡೆ ಅವರು ಕಿತ್ತೊಗೆದಿದ್ದಾರೆ. ಇದನ್ನು ಪ್ರಶ್ನಿಸಿದ ನಿರಂಜನ ಹೆಗಡೆ ಅವರ ಮಾವ ಕೃಷ್ಣಮೂರ್ತಿ ಭಟ್ಟ ಅವರಿಗೆ ನರಸಿಂಹ ಹೆಗಡೆ ಅವರು ನಿಂದಿಸಿದ್ದಾರೆ.
ಸಿದ್ದಾಪುರದ ತ್ಯಾಗಲಿ ಗ್ರಾಮದಲ್ಲಿ ನಿರಂಜನ ಹೆಗಡೆ ಅವರ ಭೂಮಿಯಿದೆ. ಹಣಜಿಬೈಲಿನ ಕೃಷ್ಣಮೂರ್ತಿ ಗಂಗಾಧರ ಭಟ್ಟ ಅವರು ತಮ್ಮ ಅಳಿಯ ಅಳಿಯ ನಿರಂಜನ್ ಹೆಗಡೆ ಅವರಿಂದ ಆ ಭೂಮಿಯ ವಿಷಯವಾಗಿ ಪವರ್ ಆಫ್ ಅಟಾರ್ನಿ ಅಧಿಕಾರಪಡೆದಿದ್ದಾರೆ. ಆದರೆ, ಆ ಭೂಮಿಯ ವಹಿವಾಟಿಗೆ ಮೊದಲಿನಿಂದಲೂ ಮಂತಿಗೆಮನೆಯ ನರಸಿಂಹ ಗಣಪತಿ ಹೆಗಡೆ ಅವರು ಅಡ್ಡಿಪಡಿಸುತ್ತಿದ್ದಾರೆ.
ಇದೇ ವಿಷಯವಾಗಿ ನಿರಂಜನ ಹೆಗಡೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು, 2022ರಲ್ಲಿ ನ್ಯಾಯಾಲಯವೂ ನರಸಿಂಹ ಹೆಗಡೆ ಅವರಿಗೆ ಅನಗತ್ಯ ತಂಟೆ-ತಕರಾರಿಗೆ ಹೋಗದಂತೆ ಸೂಚನೆ ನೀಡಿದೆ. ಅದಾಗಿಯೂ 2025ರ ಡಿಸೆಂಬರ್ 31ರಂದು ನರಸಿಂಹ ಹೆಗಡೆ ಅವರು ತಮ್ಮ ಕಿಡಿಗೇಡಿತನ ಮುಂದುವರೆಸಿದ್ದಾರೆ.
ಆ ದಿನ ಐದು ಜನ ಆಳುಗಳ ಜೊತೆ ನಿರಂಜನ ಹೆಗಡೆ ಅವರ ತೋಟಕ್ಕೆ ಬಂದ ನರಸಿಂಹ ಹೆಗಡೆ ಅವರು ಅಲ್ಲಿದ್ದ ಬೇಲಿಯನ್ನು ಕಿತ್ತು ಹಾಕಿದ್ದಾರೆ. ಇದನ್ನು ಪ್ರಶ್ನಿಸಿದ ಕೃಷ್ಣಮೂರ್ತಿ ಭಟ್ಟ ಅವರಿಗೆ ಬೈದಿದ್ದಾರೆ. ಇದರಿಂದ ನೊಂದ ಕೃಷ್ಣಮೂರ್ತಿ ಭಟ್ಟ ಅವರು ಪೊಲೀಸರ ಬಳಿ ತಮ್ಮ ಅಳಲು ತೋಡಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.