ಬೆಂಗಳೂರು, ಪುಣೆ, ಮಹಾರಾಷ್ಟ್ರ ಹಾಗೂ ಹೈದರಾಬಾದ್ ಓಡಾಟ ನಡೆಸಿ ಕೊನೆಗೆ ಚೆನೈಗೆ ತಲುಪಿದ್ದ ಕಾರವಾರದ ಚಿರಾಗ ಕೋಠಾರಕರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆಪಡೆದಿದ್ದಾರೆ.
ಕಾರವಾರದ ಕದ್ರಾದ ರಿಶೇಲ್ ಡಿಸೋಜಾ ಆತ್ಮಹತ್ಯೆ ನಂತರ ಚಿರಾಗ ಕೋಠಾರಕರ್ ಪರಾರಿಯಾಗಿದ್ದರು. ಚಿರಾಗ ಕೋಠಾರಕರ್ ಅವರ ತಾಯಿ ಚೈತ್ರಾ ಕೋಠಾರಕರ್ ಅವರು ಜಿಲ್ಲಾ ಪಂಚಾಯತ ಮಾಜಿ ಸದಸ್ಯೆಯಾಗಿದ್ದು, ಪ್ರಭಾವಿಯೂ ಆಗಿದ್ದರಿಂದ ಈ ವಿಷಯ ದೊಡ್ಡದಾಗಿತ್ತು. ಚಿರಾಗ ಕೋಠಾರಕರ್ ಅವರು ರಿಶೇಲ್ ಅವರ ಮೇಲೆ ಅತ್ಯಾಚಾರ ನಡೆಸಿದ ಆರೋಪವ್ಯಕ್ತವಾಗಿದ್ದು, ಚಿರಾಗ ಬಂಧನಕ್ಕೆ ಆಗ್ರಹಿಸಿ ಸಾಕಷ್ಟು ಪ್ರತಿಭಟನೆಗಳು ಸಹ ನಡೆದಿದ್ದವು. 20 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಚಿರಾಗ ಕೋಠಾರಕರ್ ನಿನ್ನೆ ಚೆನೈಯಲ್ಲಿ ಸಿಕ್ಕಿ ಬಿದ್ದಿದ್ದರು.
ಚಿರಾಗ ಕೋಠಾರಕರ್ ಹುಡುಕಾಟಕ್ಕೆ ಮೂರು ತಂಡ ರಚಿಸಲಾಗಿತ್ತು. ಮೂವರು ಇನ್ಸಪೆಕ್ಟರ್ ಹಾಗೂ ಆರು ಪಿಸೈ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಸುವರ್ಣ ಗಾಂವ್ಕರ್ ಹಾಗೂ ನಿತಿನ್ ಗಾಂವ್ಕರ್ ಎಂಬಾತರು ಸಹಾಯ ಮಾಡಿದ್ದು ಪೊಲೀಸರ ಗಮನಕ್ಕೆ ಬಂದಿತ್ತು. ಪೊಲೀಸ್ ಲೋಪದ ಹಿನ್ನಲೆ ಕದ್ರಾ ಪಿಸೈ ಸುನೀಲ ಬಂಡಿವಡ್ಡರ್ ಅವರನ್ನು ಅಮಾನತು ಮಾಡಲಾಗಿತ್ತು. ಚಿರಾಗ ಕೋಠಾರಕರ್ ಪರಾರಿ ಹಾಗೂ ರಿಶೇಲ್ ಡಿಸೋಜಾ ಸಾವಿನ ವಿಷಯವಾಗಿ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ಧವೂ ಪೊಲೀಸರು ಕ್ರಮ ಜರುಗಿಸಿದ್ದರು.
ಸದ್ಯ ರಿಶೇಲ್ ಡಿಸೋಜಾ ಅವರ ಶವದ ಮರು ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಚಿರಾಗ ಕೋಠಾರಕರ್ ಅವರ ವಿಚಾರಣೆಯೂ ನಡೆಯಲಿದೆ. ಪೊಲೀಸರ ಮೇಲೆ ಸಾಕಷ್ಟು ಒತ್ತಡ ತಂದಿದ್ದ ಈ ಪ್ರಕರಣ ಚಿರಾಗ ಬಂಧನದ ನಂತರ ಇನ್ನೊಂದು ಹಂತ ತಲುಪಿದೆ.