ಶಿರಸಿಯ ಸ್ವೀಟ್ ಅಂಗಡಿಯಲ್ಲಿ ಸಿಗರೇಟು ಸಿಗದ ಕಾರಣ ಆಕ್ರೋಶಗೊಂಡ ಗ್ರಾಹಕರು ಆ ಅಂಗಡಿಯ ಗಾಜು ಒಡೆದಿದ್ದಾರೆ. ಜೊತೆಗೆ ಅಂಗಡಿ ಒಳಗೆ ನುಗ್ಗಿ ಅಲ್ಲಿದ್ದ ಟಿವಿಯನ್ನು ಧ್ವಂಸ ಮಾಡಿದ್ದಾರೆ.
ರಾಜಸ್ಥಾನದ ರಮೇಶ ಮಾಂಗಿಲಾಲ್ ಅವರು ಶಿರಸಿ ಗಡೇಹಳ್ಳಿ ಸುಬ್ರಾಯ ನಾಯ್ಕ ಅಂಗಡಿ ಮಳಿಗೆಯಲ್ಲಿ ಜೈ ಮಾತಾ ಸ್ವೀಟ್ಸ್ ಎಂಬ ಮಳಿಗೆ ನಡೆಸುತ್ತಿದ್ದಾರೆ. ಡಿ 31ರಂದು ಅರೆಕೊಪ್ಪದ ಅಮಾನ್ ಹನೀಪ ಶೇಖ್ ಹಾಗೂ ಬನವಾಸಿ ರಸ್ತೆಯ ರಕ್ಷಿತ ರಾಮು ಬೆಳಗಾವ್ ಅವರು ಆ ಅಂಗಡಿಗೆ ಬಂದು ಸಿಗರೇಟು ಕೇಳಿದ್ದಾರೆ. ಆಗ, ರಮೇಶ್ ಅವರು `ನಾವು ಇಲ್ಲಿ ಸಿಗರೇಟು ಮಾರುವುದಿಲ್ಲ’ ಎಂದಿದ್ದಾರೆ. ಅದರಿಂದ ಆ ಇಬ್ಬರು ಸಿಟ್ಟಾಗಿ ಬೈದು ಅಲ್ಲಿಂದ ಹೋಗಿದ್ದಾರೆ.
ಅದೇ ದಿನ ಮಧ್ಯಾಹ್ನ ಮತ್ತೆ ಕಾರಿನಲ್ಲಿ ಬಂದ ಅಮಾನ್ ಶೇಖ್ ಹಾಗೂ ರಕ್ಷಿತ ಬೆಳಗಾವ್ ಅವರು ಮತ್ತೆ ಬೈಗುಳ ಶುರು ಮಾಡಿದ್ದಾರೆ. ಅಂಗಡಿಗೆ ತಾಡಪಲ್ ಹಾಸಿ ಒಳಗೆ ಮಲಗಿದ್ದ ರಮೇಶ ಮಾಂಗಿಲಾಲ್ ಅವರನ್ನು ಎಬ್ಬಿಸಿ ನಿಂದಿಸಿದ್ದಾರೆ. `ಹೊರಗಿನಿಂದ ಬಂದು ನಮ್ಮ ಏರಿಯಾದಲ್ಲಿ ವ್ಯಾಪಾರ ಮಾಡುತ್ತೀಯಾ. ಸಿಗರೇಟು ಕೇಳಿದರೆ ಕೊಡುವುದಿಲ್ಲವಾ?’ ಎಂದು ದಬಾಯಿಸಿದ್ದಾರೆ. ಅದಾದ ನಂತರ ದೊಡ್ಡ ದೊಡ್ಡ ಕಲ್ಲುಗಳನ್ನು ಅಂಗಡಿ ಮೇಲೆ ಎಸೆದಿದ್ದಾರೆ. ಆಗ ಅಂಗಡಿಯ ಹೊರಭಾಗದಲ್ಲಿ ಗಾಜು ಪುಡಿಪುಡಿಯಾಗಿದ್ದು, ಅದಾದ ನಂತರ ಅಂಗಡಿ ಒಳಗೆ ನುಗ್ಗಿ ಟಿವಿಯನ್ನು ಧ್ವಂಸ ಮಾಡಿದ್ದಾರೆ.
ಇದರಿಂದ ವ್ಯಾಪಾರಿ ರಮೇಶ ಮಾಂಗಿಲಾಲ್ ಅವರಿಗೆ 45 ಸಾವಿರ ರೂ ನಷ್ಟವಾಗಿದೆ. ತಮ್ಮ ಅಂಗಡಿಗೆ ನುಗ್ಗಿ ದಾಂಧಲೆ ಮಾಡಿದರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಮೇಶ ಮಾಂಗಿಲಾಲ್ ಅವರು ಪೊಲೀಸ್ ದೂರು ನೀಡಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ್ದಾರೆ.