ಕುಮಟಾದ ಹನುಮಂತ ಮುಕ್ರಿ ಅವರಿಗೆ ಪೊಲೀಸರ ಹೆಸರಿನಲ್ಲಿ ವಂಚಕರು ಫೋನ್ ಮಾಡಿದ್ದಾರೆ. 25 ಸಾವಿರ ರೂ ಫೋನ್ ಪೇ ಮಾಡದೇ ಇದ್ದರೆ 3 ಲಕ್ಷ ರೂ ದಂಡ ವಿಧಿಸುವುದಾಗಿ ಬೆದರಿಸಿದ್ದಾರೆ.
ಜನವರಿ 22ರಂದು ಹಳಕಾರದ ಹನುಮಂತ ಮುಕ್ರಿ ಅವರಿಗೆ ಫೋನ್ ಬಂದಿದೆ. `ರಾಮನಗರ ಪೊಲೀಸ್ ಠಾಣೆಯ ಪಿಸೈ ಜಾದವ್’ ಎಂದು ಪರಿಚಯಿಸಿಕೊಂಡ ವಂಚಕರು `ಹುಡುಗಿಗೆ ಫೋಟೋ ಶೇರ್ ಮಾಡಿದ ಬಗ್ಗೆ ದೂರು ಬಂದಿದೆ. ಇದಕ್ಕೆ 3 ಲಕ್ಷ ರೂ ದಂಡ ಪಾವತಿಸಬೇಕಿದ್ದು, ತಕ್ಷಣ 25 ಸಾವಿರ ರೂ ಫೋನ್ ಪೇ ಮಾಡದಿದ್ದರೆ ಜೈಲಿಗೆ ಹಾಕುತ್ತೇವೆ’ ಎಂದು ಬೆದರಿಸಿದ್ದಾರೆ. `ಹೆಂಡತಿ-ಮಕ್ಕಳನ್ನು ಸಹ ಪೊಲೀಸ್ ಠಾಣೆಗೆ ಕರೆಯಿಸುತ್ತೇವೆ’ ಎಂದು ಸಹ ವಂಚಕರು ಹೆದರಿಸಿದ್ದಾರೆ.
ಈ ಫೋನ್ ಕರೆಯಿಂದ ಕಂಗಾಲಾದ ಹನುಮಂತ ಮುಕ್ರಿ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರಕ್ಕೆ ಓಡಿ ಬಂದಿದ್ದಾರೆ. ಅಲ್ಲಿದ್ದ ಆಗ್ನೇಲ್ ರೋಡ್ರಿಗಸ್ ಅವರು ಫೋನ್ ಬಂದ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ಅದಾದ ನಂತರ ವಂಚನೆಯ ಫೋನ್ ಕರೆಯ ಬಗ್ಗೆ ಹನುಮಂತ ಮುಕ್ರಿ ಅವರಿಗೆ ಅರಿವು ಮೂಡಿಸಿದ್ದಾರೆ. ಸಾಲಪಡೆಯುವುದಕ್ಕಾಗಿ ಹನುಮಂತ ಮುಕ್ರಿ ಅವರು ಅರ್ಜಿ ಹಾಕಿದ್ದು, ಅವರಿಗೆ 3 ಲಕ್ಷ ರೂ ಮಂಜೂರಿ ಆಗಿದೆ. ಅದೇ ಮಾಹಿತಿ ಸೋರಿಕೆಯಾಗಿ ಸೈಬರ್ ಕಳ್ಳರಿಗೆ ಸಿಕ್ಕ ಅನುಮಾನವ್ಯಕ್ತವಾಗಿದೆ.
`ಸೈಬರ್ ಅಪರಾಧದ ಬಗ್ಗೆ ಜನ ಹೆದರದೇ 1930ಗೆ ಫೋನ್ ಮಾಡಿ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕೋರಿದ್ದಾರೆ.