`ರೆಡಿಮೇಡ್ ಹಾಗೂ ಜಂಕ್ ಫುಡ್ ಬಳಕೆಯಿಂದ ಸಹಜವಾಗಿ ರೋಗ ನಿರೋಧಕ ಶಕ್ತಿ ಕ್ಷೀಣಿಸಲಿದೆ. ಹೀಗಾಗಿ ಪ್ರತಿಯೊಬ್ಬರು ದಿನನಿತ್ಯ ಸಾವಯವ ಸಿರಿ ಧಾನ್ಯ ಆಹಾರವನ್ನು ಮಾತ್ರ ಬಳಸಬೇಕು’ ಎಂದು ಶಿರಸಿ-ಸಿದ್ದಾಪುರ ಕ್ಷೇತ್ರ ಶಾಸಕ ಭೀಮಣ್ಣ ನಾಯ್ಕ ಅವರು ಮನವಿ ಮಾಡಿದ್ದಾರೆ.
`ಸಾವಯವ ಆಹಾರಗಳಿಂದ ಮಾತ್ರ ಸುಸ್ಥಿರ ಆರೋಗ್ಯ ಹೊಂದಲು ಸಾಧ್ಯ’ ಎಂದವರು ಪ್ರತಿಪಾದಿಸಿದ್ದಾರೆ. `ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯಲ್ಲಿ ರೆಡಿಮೇಡ್ ಹಾಗೂ ಜಂಕ್ ಫುಡ್‌ಗಳ ಬಳಕೆ ಹೆಚ್ಚಾಗುತಿರುವುದು ಕಳವಳಕಾರಿ. ಅಂಥ ಆಹಾರ ಬಳಸುವುದರಿಂದ ಮಾನವನ ಸಾಮರ್ಥ್ಯ ಕುಸಿಯುವುದರಿಂದ ದೇಶದ ಅಭಿವೃದ್ಧಿಯಲ್ಲಿ ಸಮರ್ಪಕ ಮಾನವ ಸಂಪನ್ಮೂಲದ ಬಳಕೆಗೆ ತಡೆ ಉಂಟಾಗುತ್ತದೆ’ ಎಂದವರು ಹೇಳಿದ್ದಾರೆ. `ಸಾವಯವ ಸಿರಿ ಧಾನ್ಯ ಆಹಾರ ಎಲ್ಲರಿಗೂ ಕ್ಷೇಮ. ಆರೋಗ್ಯಕ್ಕೂ ಸಹಕಾರಿ. ಹೀಗಾಗಿ ಎಲ್ಲರೂ ಸಾವಯವ ಸಿರಿ ಧಾನ್ಯಗಳ ಬಳಕೆ ಹೆಚ್ಚು ಮಾಡಬೇಕು’ ಎಂದವರು ಕರೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಹಾಗೂ ಸಂಘ-ಸAಸ್ಥೆಗಳ ಸಹಯೋಗದಲ್ಲಿ ಅಂತರರಾಷ್ಟಿಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳಕ್ಕೆ ಭೀಮಣ್ಣ ನಾಯ್ಕ ಅವರು ಚಾಲನೆ ನೀಡಿದ್ದು, ಅದಾದ ನಂತರ ತಮ್ಮ ಸಂದೇಶ ರವಾನಿಸಿದರು. ಸಾವಯವ ಸಿರಿಧಾನ್ಯ ವಾಕಥಾನ್ ಜಾಥಾದಲ್ಲಿ ಭಾಗವಹಿಸಿದ ಜಂಟಿ ಕೃಷಿ ನಿರ್ದೇಶಕ ಶಿವಪ್ರಸಾದ ಗಾಂವಕರ್ ಅವರು ಸಾವಯವ ಹಾಗೂ ಸಿರಿಧಾನ್ಯಗಳ ಕುರಿತಾದ ಮಹತ್ವವನ್ನು ವಿವರಿಸಿದರು.
ಈ ವಾಕಥಾನ್ ಜಾಥಾದಲ್ಲಿ ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕರಾದ ಬಿ.ಪಿ. ಸತೀಶ್, ಉತ್ತರ ಕನ್ನಡ ಜಿಲ್ಲಾ ಸಾವಯವ ಕೃಷಿ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್, ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್ ವಾಸುದೇವ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ರೂಪಾ ಪಾಟೀಲ್, ತೋಟಗಾರಿಕಾ ಮಹಾವಿದ್ಯಾಲಯದ ಎಮ್ ಹೆಚ್ ತಟಗಾರ, ಶಿರಸಿ ತಾಲೂಕಾ ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಇತರರಿದ್ದರು.
ದಿನೇಶ ಹೆಗಡೆ ಅವರು ಕಾರ್ಯಕ್ರಮಕ್ಕೆ ಸಾಕಷ್ಟು ಸಿದ್ಧತೆ ಮಾಡಿದ್ದರು. ಶಿರಸಿ ಮಾರಿಕಾಂಬಾ ದೇವಸ್ಥಾನ, ಶಿವಾಜಿ ವೃತ್ತ, ಪೋಸ್ಟ್ ಆಫೀಸ್ ಸರ್ಕಲ್, ಸಿ ಪಿ ಬಝಾರ್, ಝೂ ಸರ್ಕಲ್ ಮೂಲಕ ರಾಘವೇಂದ್ರ ಮಠದವರೆಗೆ ಜಾಗೃತಿ ಜಾಥಾ ಸಂಚರಿಸಿತು. ವಾಕ್‌ಥಾನ್ ಉದ್ದಕ್ಕೂ ಸಾವಯವ, ಸಿರಿಧಾನ್ಯಗಳ ಬಗ್ಗೆ ಘೋಷಣೆಗಳನ್ನು ಕೂಗುತ್ತಾ, ಕರಪತ್ರಗಳನ್ನು ಹಂಚುತ್ತಾ ಅರಿವು ಮೂಡಿಸಲಾಯಿತು. ವಾಕಥಾನ್‌ನ ಆರಂಭದಲ್ಲಿ ಕೃಷಿ ನಿರ್ದೇಶಕ ಪಾಂಡು ಕೆ ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಕೃಷಿ ನಿರ್ದೇಶಕ ಮಧುಕರ ನಾಯ್ಕ ಕಾರ್ಯಕ್ರಮವನ್ನು ನಿರ್ವಹಿಸಿದರು.