ಕಂಠಪೂರ್ತಿ ಕುಡಿದು ಕಡಲ ತೀರಕ್ಕೆ ಬಂದಿದ್ದ ಪ್ರಸನ್ನ ಅವರು ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು, ಮುರುಡೇಶ್ವರದ ಓಸೀಯನ್ ಅಡ್ವೆಂಚರ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಪ್ರಸನ್ನ ಅವರ ಪ್ರಾಣ ಉಳಿದಿದೆ.
ಬೆಳಗಾವಿ ಮೂಲದ ಪ್ರಸನ್ನ ಅವರು ಶುಕ್ರವಾರ ಮುರುಡೇಶ್ವರಕ್ಕೆ ಬಂದಿದ್ದರು. ಎಲ್ಲೆಂದರಲ್ಲಿ ಒಂಟಿಯಾಗಿ ಸಂಚರಿಸುವ ಅವರು ಅಲ್ಲಿಯೇ ಬಾರ್ ಪ್ರವೇಶಿಸಿ ಮದ್ಯ ಸೇವಿಸಿದ್ದರು. ಕುಡಿದ ನಶೆಯಲ್ಲಿಯೇ ತೂರಾಡುತ್ತ ಕಡಲ ತೀರಕ್ಕೆ ಬಂದರು. ಅಲೆಗಳ ಅಬ್ಬರದ ಬಗ್ಗೆ ಅರಿವಿಲ್ಲದೇ ಅವರು ಸಮುದ್ರದ ಕಡೆ ಹಾರಿದರು.
ಈಜು ಬಾರದಿದ್ದರೂ ಆಳ ಸಮುದ್ರದ ಕಡೆ ನಡೆದು ಹೋಗುತ್ತಿದ್ದ ಪ್ರಸನ್ನ ಅವರಿಗೆ ಅಲೆಯೊಂದು ಅಬ್ಬರಿಸಿತು. ಅದರ ರಭಸಕ್ಕೆ ಅವರು ನೀರಿನ ಆಳಕ್ಕೆ ಕೊಚ್ಚಿ ಹೋದರು. ನೀರಿನಿಂದ ಮೇಲೆ ಬರಲಾಗದೇ ಸಮಸ್ಯೆಗೆ ಸಿಲುಕಿದ್ದ ಪ್ರಸನ್ನ ಅವರು ಅಲ್ಲಿಯೇ ಇದ್ದ ಓಸೀಯನ್ ಅಡ್ವೆಂಚರ್ ಸಿಬ್ಬಂದಿ ವಿಘ್ನೇಶ್ವರ ಹರಿಕಂತ್ರ ಅವರ ಕಣ್ಣಿಗೆ ಬಿದ್ದರು. ತಕ್ಷಣ ವಾಟರ್ ಬೈಕ್ ಮೂಲಕ ಸಮುದ್ರದ ಕಡೆ ತೆರಳಿದ ಅವರು ರಾಜೇಶ ಹರಿಕಂತ್ರ ಅವರ ಜೊತೆಗೂಡಿ ಪ್ರಸನ್ನ ಅವರ ಜುಟ್ಟು ಹಿಡಿದು ಮೇಲೆತ್ತಿದರು.
ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದಿದ್ದ ಪ್ರಸನ್ನ ಅವರನ್ನು ನೀರಿನಿಂದ ಮೇಲೆ ಕರೆತಂದು ಅವರ ಜೀವ ಕಾಪಾಡಿದರು. ಅದಾದ ನಂತರ ಓಸೀಯನ್ ಅಡ್ವೆಂಚರ್ ಸಿಬ್ಬಂದಿ ಪೊಲೀಸರನ್ನು ಕರೆದು ವಿಷಯ ತಿಳಿಸಿದರು. ಪೊಲೀಸರು ಪ್ರಸನ್ನ ಅವರಿಗೂ ಎಚ್ಚರಿಕೆ ನೀಡಿ ಕಳುಹಿಸಿದರು.
`ಕುಡಿದು ಕಡಲ ತೀರಕ್ಕೆ ಬರಬೇಡಿ. ಕುಡಿಯುವುದಕ್ಕಾಗಿಯೂ ಕಡಲ ತೀರಕ್ಕೆ ಬರಬೇಡಿ’