ಕಾರವಾರದ ಚಿತ್ತಾಕುಲ ಗ್ರಾಮ ಪಂಚಾಯತದಲ್ಲಿ ಅಧಿಕಾರಿಗಳು ಮಾಡಿದ ಅಪರಾತಪರಾದ ತನಿಖೆ ಹಳ್ಳ ಹಿಡಿದಿದೆ. ದೂರುದಾರರಾಗಿದ್ದ ಗ್ರಾ ಪಂ ಅಧ್ಯಕ್ಷರಾಗಿದ್ದ ರಾಜು ತಾಂಡೇಲ ಅವರ ಮರಣದ ನಂತರ ಆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದ ಅನುಮಾನವ್ಯಕ್ತವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಕೇಳಿದರೂ ಅದನ್ನು ರಹಸ್ಯವಾಗಿರಿಸಿದ್ದು, ತನಿಖಾಧಿಕಾರಿಗಳ ಮೇಲೆಯೇ ಅನುಮಾನ ಹುಟ್ಟುತ್ತಿದೆ.
ಎರಡು ವರ್ಷದ ಹಿಂದೆ ಚಿತ್ತಾಕುಲ ಗ್ರಾಮ ಪಂಚಾಯತದಲ್ಲಿ ಹಣಕಾಸಿನ ಅಪರಾತಪರ ನಡೆದಿತ್ತು. ರಾತ್ರಿ ವೇಳೆ ಗ್ರಾಮ ಪಂಚಾಯತ ಬಾಗಿಲು ತೆರೆದ ಅಧಿಕಾರಿಗಳು ಆಗದ ಕೆಲಸಕ್ಕೆ ಬಿಲ್ ಪಾವತಿಯ ಪ್ರಯತ್ನ ಮಾಡಿದ್ದರು. ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷೆ ಜೊತೆ ಕೆಲ ಸದಸ್ಯರು ಸೇರಿ ರಾತ್ರಿ ವೇಳೆ ಕಚೇರಿಗೆ ಆಗಮಿಸಿದ್ದು, ಪಿಡಿಓ ಸಹಕಾರದಲ್ಲಿ ಗುತ್ತಿಗೆದಾರನ ಹೆಸರಿಗೆ ಚೆಕ್ ಬರೆದಿದ್ದರು. ಅದೇ ದಿನ ಚಿತ್ತಾಕುಲ ಗ್ರಾಮ ಪಂಚಾಯತಗೆ ರಾಜು ತಾಂಡೇಲ್ ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಉಪಾಧ್ಯಕ್ಷರಾಗಿ ಸೂರಜ ದೇಸಾಯಿ ಅವರು ಆಯ್ಕೆಯಾಗಿದ್ದು ಅವರಿಬ್ಬರೂ ಸೇರಿ ಗ್ರಾಮ ಪಂಚಾಯತ ಹೊರಗಡೆ ರಾತ್ರಿ ವೇಳೆ ಸಂಭ್ರಮ ಹಂಚಿಕೊಳ್ಳುತ್ತಿದ್ದರು. ಆಗ ಸರ್ಕಾರಿ ಕಚೇರಿಯಲ್ಲಿ ದೀಪ ಬೆಳಗುತ್ತಿರುವುದನ್ನು ಗಮನಿಸಿದರು.
ರಾತ್ರಿ 9.40ರ ವೇಳೆಗೆ ದೀಪ ನೋಡಿದ ರಾಜು ತಾಂಡೇಲ್ ಅವರು ಗ್ರಾಮ ಪಂಚಾಯತ ಕಚೇರಿ ಪ್ರವೇಶಿಸಿದರು. ಆಗ, ಅಲ್ಲಿ ಪಿಡಿಓ ರಾಜೇಶ ನಾಯ್ಕ ಅವರು ಚೆಕ್ ಬರೆಯುತ್ತಿರುವುದನ್ನು ಗಮನಿಸಿದರು. ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ಆ ಚೆಕ್’ಗೆ ಸಹಿ ಹಾಕುವವರಿದ್ದು, `ಆಗದ ಕೆಲಸಕ್ಕೆ ಚೆಕ್ ಏಕೆ ಬರೆಯಲಾಗುತ್ತಿದೆ?’ ಎಂದು ಪ್ರಶ್ನಿಸಿದರು. ಇದರಿಂದ ಅಲ್ಲಿದ್ದವರು ತಬ್ಬಿಬ್ಬಾದರು. `ರಾತ್ರಿ ವೇಳೆ ಸರ್ಕಾರಿ ಕಚೇರಿ ಬಾಗಿಲು ತೆರೆಯುವುದು ಅಪರಾಧ. ಆ ಅವಧಿಯಲ್ಲಿ ಹಣಕಾಸಿನ ವ್ಯವಹಾರ ನಡೆಸುವುದು ಇನ್ನಷ್ಟು ಗಂಭೀರ ಪ್ರಮಾಣದ ಅಪರಾಧ’ ಎಂದು ರಾಜು ತಾಂಡೇಲ್ ಅವರು ಅಸಮಧಾನವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಗ್ರಾಮ ಪಂಚಾಯತಗೆ ಭದ್ರತೆ ಒದಗಿಸಿದರು. ಅಕ್ರಮದ ಬಗ್ಗೆ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದು, ಜಲ್ಲಾ ಪಂಚಾಯತವೂ ತನಿಖೆಗೆ ಆದೇಶಿಸಿತು. ಅದಾಗಿ ಸುಮಾರು ಒಂದು ವರ್ಷದ ನಂತರ ರಾಜು ತಾಂಡೇಲ್ ಅವರು ಸಾವನಪ್ಪಿದ್ದು, ಅವರು ಕೊಟ್ಟ ದೂರಿನ ತನಿಖೆ ಮಾತ್ರ ಇನ್ನೂ ಮುಗಿದಿಲ್ಲ. ರಾಜು ತಾಂಡೇಲ್ ಅವರ ಸಾವಿನ ಜೊತೆಯೇ ಆ ಅಕ್ರಮದ ಸತ್ಯವೂ ಮುಚ್ಚಿ ಹೋಗುವ ಲಕ್ಷಣಗಳು ಹೆಚ್ಚಾಗಿದೆ.
ತನಿಖೆಯ ಬಗ್ಗೆ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದಾಗ `ಕಲಂ 8(1)ಜೆ ಪ್ರಕಾರ ಮಾಹಿತಿ ನೀಡಲು ಬರುವುದಿಲ್ಲ’ ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳು ಉತ್ತರಿಸಿದ್ದು ಸಹ ಅನುಮಾನಕ್ಕೆ ಕಾರಣವಾಗಿದೆ. ದೇಶದ ಸಮಗ್ರತೆ ಮತ್ತು ಸೌರ್ವಭೌಮತ್ವಕ್ಕೆ ಧಕ್ಕೆ ಬರುವ ಹಾಗೂ ವಿದೇಶಿ ಸಂಬoಧಕ್ಕೆ ತೊಂದರೆ ಆಗುವ ಮಾಹಿತಿಯನ್ನು ಈ ನಿಯಮದ ಅಡಿ ನೀಡಲು ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ, ತನಿಖೆಯ ಅಂಶಗಳು ಯಾರ ಜೀವಕ್ಕೆ ಅಪಾಯ ಆಗುವ ಸಂಗತಿ ಅಲ್ಲ. ವೈಯಕ್ತಿಕ ವಿಚಾರಗಳು ಸಹ ಅಲ್ಲ. ಬೌದ್ಧಿಕ ಹಕ್ಕುಗಳಿಗೆ ಸಹ ಈ ಮಾಹಿತಿ ಬಹಿರಂಗಪಡಿಸುವುದರಿAದ ಸಮಸ್ಯೆ ಇಲ್ಲ. ಅದಾಗಿಯೂ, ಅಧಿಕಾರಿಗಳು ಮಾಹಿತಿ ಬಚ್ಚಿಡುತ್ತಿರುವುದರಿಂದ ತನಿಖಾಧಿಕಾರಿಗಳ ಮೇಲೆಯೇ ಅನುಮಾನ ಹುಟ್ಟಿದೆ.