ಕಾರವಾರದ ಸೌರವ್ ಕಲಾಲ್ ಹಾಗೂ ಪ್ರಶಾಂತ ರಾಯ್ಕರ್ ಅವರ ನಡುವೆ ಕಾದಾಟ ನಡೆದಿದೆ. ಈ ಜಗಳದಲ್ಲಿ ಪ್ರಶಾಂತ ರಾಯ್ಕರ್ ಅವರು ಸೌರವ್ ಕಲಾಲ್ ಅವರ ಮುಖಕ್ಕೆ ಮುಷ್ಟಿಯಿಂದ ಹೊಡೆದಿದ್ದಾರೆ. ಪರಿಣಾಮ ಸೌರವ್ ಕಲಾಲ್ ಅವರ ಮೂಗಿನಿಂದ ರಕ್ತ ಸುರಿದಿದೆ.
ಕಾರವಾರದ ದೋಬಿಗಾಟ್ ರಸ್ತೆಯ ಲಿಂಗನಾಯ್ಕವಾಡದಲ್ಲಿ ಸೌರವ್ ಅಶೋಕ ಕಲಾಲ್ ಅವರು ವಾಸವಾಗಿದ್ದಾರೆ. ಸೌರವ್ ಕಲಾಲ್ ಅವರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸಮೀಪದ ಸೋನಾರವಾಡದಲ್ಲಿ ಪ್ರಶಾಂತ ರಾಯ್ಕರ್ ಅವರು ವಾಸವಾಗಿದ್ದಾರೆ. ಪ್ರಶಾಂತ ರಾಯ್ಕರ್ ಅವರು ಪೆಂಟಿAಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. 22 ವರ್ಷದ ಪ್ರಶಾಂತ ರಾಯ್ಕರ್ ಅವರು ವಯಸ್ಸಿನಲ್ಲಿ ಕಿರಿಯರಾಗಿದ್ದರೂ 25 ವರ್ಷದ ಸೌರವ್ ಕಲಾಲ್ ಅವರ ಮೇಲೆ ಕೈ ಮಾಡಿದ್ದಾರೆ.
ಜನವರಿ 18ರ ರಾತ್ರಿ 10.30ಕ್ಕೆ ಸೌರವ್ ಕಲಾಲ್ ಅವರು ದೈವಜ್ಞ ಹಾಲ್ ಬಳಿ ಹೋಗುವಾಗ ಅಲ್ಲಿಯೇ ನಿಂತಿದ್ದ ಪ್ರಶಾಂತ ರಾಯ್ಕರ್ ಅವರು ಸೌರವ್ ಕಲಾಲ್ ಅವರನ್ನು ಕರೆದಿದ್ದಾರೆ. ಇದಕ್ಕೆ ಸೌರವ್ ಕಲಾಲ್ ಪ್ರತಿಕ್ರಿಯಿಸದ ಕಾರಣ `ಕುರಿ ಕಾಯುವ ಕಲಾಲ್’ ಎಂದು ನಿಂದಿಸಿದ್ದಾರೆ. ಆಗಲೂ ಮಾತನಾಡಿದ ಕಾರಣ `50 ರೂಪಾಯಿಗೆ ಹೆಣ್ಮಕ್ಕಳ ಚಡ್ಡಿ ಮಾರುವವನೇ’ ಎಂದು ಕೂಗಿ ಹೇಳಿದ್ದಾರೆ. ಇದರಿಂದ ಸೌರವ್ ಕಲಾಲ್ ಅವರು ಅವಮಾನ ಅನುಭವಿಸಿ, ಮೌನವಾಗಿದ್ದಾರೆ. ರೇಗಿಸಿದರೂ ಮೌನವಾಗಿರುವ ಸೌರವ್ ಕಲಾಲ್ ಅವರನ್ನು ನೋಡಿ ಪ್ರಶಾಂತ ರಾಯ್ಕರ್ ಅವರ ಸಿಟ್ಟು ಹೆಚ್ಚಾಗಿದೆ.
ಆಗ, ದೋಬಿಘಾಟ್ ಕಡೆ ಹೋಗುತ್ತಿದ್ದ ಸೌರವ್ ಕಲಾಲ್ ಅವರನ್ನು ಪ್ರಶಾಂತ ರಾಯ್ಕರ್ ಅಡ್ಡಗಟ್ಟಿದ್ದು ಮುಖದ ಮೇಲೆ ಮುಷ್ಟಿಯಿಂದ ಹೊಡೆದಿದ್ದಾರೆ. ಆ ಏಟಿಗೆ ಸೌರವ್ ಕಲಾಲ್ ಅವರ ಮೂಗಿಗೆ ಗಾಯವಾಗಿದೆ. ರಕ್ತವೂ ಸುರಿದಿದೆ. `ನನಗೆ ಹೊಡೆಯಲು ನಿನ್ನ ಅಪ್ಪನನ್ನು ಕರೆಯುಸುತ್ತೀಯಾ?’ ಎಂದು ಪ್ರಶಾಂತ ರಾಯ್ಕರ್ ಈ ವೇಳೆ ಪ್ರಶ್ನಿಸಿದ್ದು, `ಮತ್ತೊಮ್ಮೆ ಸಿಕ್ಕಾಗ ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅನಗತ್ಯವಾಗಿ ತಮ್ಮ ಮೇಲೆ ಹಲ್ಲೆ ನಡೆದ ಬಗ್ಗೆ ಸೌರವ್ ಕಲಾಲ್ ಪೊಲೀಸರ ಮೊರೆ ಹೋಗಿದ್ದಾರೆ. ಕಾರವಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಶುರು ಮಾಡಿದ್ದಾರೆ.