ಮಹಿಳೆಯರ ಸ್ನೇಹ ಬಯಸುವ ಹೊನ್ನಾವರದ ಮಹಮದ್ ಯೂಷಾ ಅವರು ಉಪಾಯವಾಗಿ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆಯುತ್ತಿದ್ದು, ಅವರ ಸ್ನೇಹ ಸಂಪಾದಿಸುತ್ತಾರೆ. ಅದಾದ ನಂತರ ಮಹಿಳೆಯರ ಖಾಸಗಿ ಫೋಟೋಗಳನ್ನಿರಿಸಿಕೊಂಡು ಅವರನ್ನು ಬೆದರಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.
ಹೊನ್ನಾವರದ ಮಂಕಿಯಲ್ಲಿ ಮಹಮದ್ ಯೂಷಾ ಅವರು ವಾಸವಾಗಿದ್ದಾರೆ. ವಿದೇಶಿ ಸಂಖ್ಯೆಯನ್ನು ಸೇರಿ ಅವರು ಐದಕ್ಕೂ ಹೆಚ್ಚು ಮೊಬೈಲ್ ಮೊಬೈಲ್ ನಂ ಹೊಂದಿದ್ದಾರೆ. ಅವರು ನಾನಾ ಬಗೆಯ ತಂತ್ರಗಳನ್ನು ಉಪಯೋಗಿಸಿ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆಯುತ್ತಾರೆ. ಅದಾದ ನಂತರ ಮಹಿಳೆಯರಿಗೆ ಪದೇ ಪದೇ ಮೆಸೆಜ್ ಮಾಡಿ ಸ್ನೇಹ ಸಂಪಾದಿಸುತ್ತಾರೆ. ಕಷ್ಟ-ಸುಖಗಳ ಬಗ್ಗೆ ಮಾತನಾಡಿ ಆಪ್ತ ಸ್ನೇಹಿತರಾಗುತ್ತಾರೆ. ಅದಾದ ನಂತರ ಮಹಿಳೆಯರ ಅವರ ಖಾಸಗಿ ಫೋಟೋಗಳನ್ನು ಪಡೆಯುತ್ತಿದ್ದು, ಆ ಖಾಸಗಿ ಫೋಟೋಗಳ ಆಧಾರದಲ್ಲಿಯೇ ಅವರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ.
ಒಂದು ವರ್ಷದವರೆಗೆ ಮಹಿಳೆಯರ ಜೊತೆ ಸಭ್ಯವಾಗಿಯೇ ವರ್ತಿಸುವ ಮಹಮದ್ ಯೂಷಾ ಆ ನಂತರ ತಮ್ಮ ಚಾಳಿ ಶುರು ಮಾಡುತ್ತಾರೆ. ಪದೇ ಪದೇ ಫೋನ್ ಮಾಡುವುದು, ಕೆಟ್ಟ ಕೆಟ್ಟ ಸಂದೇಶ ಕಳುಹಿಸಿ ಪೀಡಿಸುವುದು, ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಸುವುದು, ಮಹಿಳೆಯ ಸ್ನೇಹಿತರ ಫೋನ್ ಸಂಖ್ಯೆಯನ್ನು ಸಂಪಾದಿಸಿ ಅವರಿಗೆ ಕಾಡಿಸುವುದು ಹಾಗೂ ಆ ಮಹಿಳೆಯರಿಗೆ ಆಪ್ತರಾಗಿರುವ ಕುಟುಂಬಗಳಿಗೆ ಖಾಸಗಿ ಫೋಟೋ ಕಳುಹಿಸುವ ಮೂಲಕ ತಮ್ಮ ವಿಕೃತ ಮನಸ್ಸನ್ನು ಸಮಾಧಾನ ಮಾಡಿಕೊಳ್ಳುತ್ತಾರೆ.
ಭಟ್ಕಳದ ಮುಗ್ದುಂ ಕಾಲೋನಿಯ ನ್ಯಾಶನಲ್ ರಸ್ತೆ ಬಳಿ ಮೌಲನಾ ಆಗಿರುವ ಮಹಮದ್ ಇನಾಯತ್ತುಲ್ಲಾ ಅವರ ಪತ್ನಿಗೂ ಮಹಮದ್ ಯೂಷಾ ಅವರು ಕಾಡಿಸುತ್ತಿದ್ದಾರೆ. ಮಿಸ್ಟಾ ರೋಹಿ ಅವರ ಜೊತೆ ಸಲುಗೆಯಿಂದ ಇದ್ದ ಮಹಮದ್ ಯೂಷಾ ಅವರ ಫೋನ್ ನಂ ಪಡೆದಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಅವರ ಸ್ನೇಹ ಸಂಪಾದಿಸಿದ್ದಾರೆ. ಆಗಾಗ ಫೋನ್ ಮಾಡುವುದು, ವಾಟ್ಸಪ್ ಮೂಲಕ ಪ್ರೀತಿಯ ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ. ಈ ವೇಳೆ ಮಿಸ್ಟಾ ರೋಹಿ ಅವರು ತಮ್ಮ ಖಾಸಗಿ ಫೋಟೋಗಳನ್ನು ಮಹಮದ್ ಯೂಷಾ ಅವರಿಗೆ ಕಳುಹಿಸಿದ್ದಾರೆ. ಆ ಫೋಟೋಗಳನ್ನು ಹಾಗೇ ಇರಿಸಿಕೊಂಡಿದ್ದ ಮಹಮದ್ ಯೂಷಾ, ವರ್ಷ ಕಳೆದ ನಂತರ ತಮ್ಮ ವರಸೆ ಬದಲಿಸಿದ್ದಾರೆ.
ಮಹಮದ್ ಯೂಷಾ ಅವರ ಕಾಟಕ್ಕೆ ನಲುಗಿದ ಮಿಸ್ಟಾ ರೋಹಿ ಅವರು ಮಹಮದ್ ಕಾಟದಿಂದ ದೂರವಾಗಲು ಬಯಸಿದ್ದಾರೆ. ಇದರಿಂದ ಇನ್ನಷ್ಟು ಸಿಟ್ಟಾದ ಮಹಮದ್ ಯೂಷಾ ಅವರು ಭಟ್ಕಳ ಜಮಿಯಾಬಾದಿನಲ್ಲಿರುವ ಮಿಸ್ಟಾ ರೋಹಿ ಅವರ ಅಣ್ಣನ ಹೆಂಡತಿ ಜೀಬಾ ಮಹಮದ್ ಸೀಬಿತುಲ್ಲಾ ಅವರ ಮೊಬೈಲಿಗೆ ಆ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾರೆ. ಇದರಿಂದ ಮಿಸ್ಟಾ ರೋಹಿ ಅವರ ಕೌಟುಂಬಿಕ ಜೀವನಕ್ಕೆ ಸಮಸ್ಯೆಯಾಗಿದೆ. ತಮ್ಮ ಮಾನಕ್ಕೆ ಕುತ್ತು ತಂದ ಮಹಮದ್ ಯೂಷಾ ವಿರುದ್ಧ ಇದೀಗ ಮಿಸ್ಟಾ ರೋಹಿ ಅವರು ಸಿಡಿದೆದ್ದಿದ್ದು, ಕಾನೂನು ಕ್ರಮಕ್ಕಾಗಿ ಪೊಲೀಸರ ಮೊರೆ ಹೊಗಿದ್ದಾರೆ. ಭಟ್ಕಳ ನಗರ ಪೊಲೀಸರು ಮಹಮದ್ ಯೂಷಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.