ಕುಮಟಾದ ಹೊಳೆಗದ್ದೆ ಟೋಲ್ ಬಳಿ ಗಲಾಟೆ ನಡೆದಿದೆ. ಈ ಗಲಾಟೆ ಹೊಡೆದಾಟದ ಸ್ವರೂಪಪಡೆದಿದ್ದು, ಎರಡು ಗುಂಪಿನವರು ಕತ್ತಿ-ಕಲ್ಲು ತೆಗೆದುಕೊಂಡು ಮಾರಾಮಾರಿ ನಡೆಸಿದ್ದಾರೆ.
ಈ ಹೊಡೆದಾಟದಲ್ಲಿ ಹೊಳೆಗದ್ದೆಯ ಅಜಯ ಮುಕ್ರಿ ಅವರಿಗೆ ಕತ್ತಿ ತಾಗಿದೆ. ಅವರ ಎದುರಾಳಿ ಬಣದ ರಮೇಶ ಮುಕ್ರಿ ಅವರ ತಲೆಗೆ ಕಲ್ಲು ತಾಗಿದೆ. ಹೊಳಗದ್ದೆ ಟೋಲ್ ಬಳಿಯಿರುವ ಸುಬ್ಬಣ್ಣ ಉಡದಂಗಿ ಅವರ ಚಹಾ ಅಂಗಡಿಯಲ್ಲಿ ಹೊಡೆದಾಟ ನಡೆದಿದೆ. ಚಹಾ ಸೇವನೆಗೆ ಬಂದಿದ್ದ ಎರಡು ಗುಂಪುಗಳು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕಚ್ಚಾಟ ನಡೆಸಿದ್ದು, ಎರಡು ಕಡೆಯವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹೊಳಗದ್ದೆ ಅಜಯ ಅನಂತ ಮುಕ್ರಿ ಅವರ ದೂರಿನ ಪ್ರಕಾರ ಗೌಥಮ ಶಿವು ಮುಕ್ರಿ, ಚಂದ್ರಹಾಸ ಮಾಸ್ತಿ ಮುಕ್ರಿ, ದಿಲೀಪ ನಾಗರಾಜ ಮುಕ್ರಿ, ರಮೇಶ ನಾಗು ಮುಕ್ರಿ, ಉಮೇಶ ಗಣಪತಿ ಮುಕ್ರಿ ಹಾಗೂ ಕೃತಿಕ ನಾಗರಾಜ ಮುಕ್ರಿ ಸೇರಿ ಆಕ್ರಮಣ ಮಾಡಿದ್ದಾರೆ. ಆ ಆಕ್ರಮಣದಿಂದ ಅಜಯ ಅನಂತ ಮುಕ್ರಿ ಅವರ ಜೊತೆ ಮಂಜುನಾಥ ಗಣಪತಿ ಮುಕ್ರಿ, ಮನೋಜ ಮಹಾಬಲೇಶ್ವರ ಮುಕ್ರಿ ಹಾಗೂ ರಿತಿಕ್ ಮಾರು ಮುಕ್ರಿ ಅವರಿಗೆ ನೋವಾಗಿದೆ. ಕರ್ಕಿ ಕೋಣಕಾರಿನ ಆಟೋ ಚಾಲಕ ಚಂದ್ರಹಾಸ್ ಮುಕ್ರಿ ಅವರ ದೂರಿನ ಪ್ರಕಾರ, ಗೌಥಮ ಮುಕ್ರಿ ರಮೇಶ ಮುಕ್ರಿ, ದಿಲೀಪ ಮುಕ್ರಿ ಉಮೇಶ ಮುಕ್ರಿ ಹಾಗೂ ಕೃತಿಕ ಜೊತೆ ಇದ್ದಾಗ ಎದುರಾಳಿಗಳು ಕಲ್ಲು ತೂರಾಟ ಮಾಡಿದ್ದಾರೆ.
ಜನವರಿ 18ರ ರಾತ್ರಿ 11.15ಕ್ಕೆ ಹೊಳೆಗದ್ದೆ ಟೋಲ್ ಗೇಟ್ ಹತ್ತಿರ ಈ ಹೊಡೆದಾಟ ನಡೆದಿದೆ. ಹಳೆ ದ್ವೇಷ ಈ ಹೊಡೆದಾಟಕ್ಕೆ ಕಾರಣವಾಗಿದೆ. ಈ ಗಲಾಟೆಯಲ್ಲಿ ಕೃತಿಕ ಮುಕ್ರಿ ಅವರು ತಮ್ಮ ಕೈಯಲ್ಲಿದ್ದ ಕತ್ತಿ ಬೀಸಿದ್ದು, ಆ ಕತ್ತಿ ಅಜಯ ಮುಕ್ರಿ ಅವರ ಕೈಗೆ ತಾಗಿದೆ. ಈ ವೇಳೆ ಮನೋಜ ಮುಕ್ರಿ ಅವರು ಹೊಡೆದ ಕಲ್ಲು ರಮೇಶ ಮುಕ್ರಿ ತಲೆಗೆ ತಾಗಿದೆ. ಎರಡು ಕಡೆಯವರ ದೂರು ಸ್ವೀಕರಿಸಿದ ಕುಮಟಾ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.