ಕುಮಟಾ ಹಿರೇಗುತ್ತಿಯ ಅಶೋಕ ನಾಯಕ ಅವರು ಸರ್ಕಾರಕ್ಕೆ ವಂಚಿಸಿದ್ದಾರೆ. ಜೊತೆಗೆ ಪರಿಸರಕ್ಕೆ ಮಾರಕವಾದ ಚಟುವಟಿಕೆ ನಡೆಸುತ್ತಿದ್ದಾರೆ.
ಕುಮಟಾದ ಹಿರೆಗುತ್ತಿಯಲ್ಲಿ ವಾಸವಾಗಿರುವ ಅಶೋಕ ಹಮ್ಮಣ್ಣ ನಾಯಕ (58) ಅವರು ವ್ಯಾಪಾರಿಯಾಗಿದ್ದಾರೆ. ಆದರೆ, ಮರಳು ವ್ಯಾಪಾರ ಮಾಡಲು ಅವರು ಅನುಮತಿಪಡೆದಿಲ್ಲ. ಅದಾಗಿಯೂ, ಅವರು ಅಲ್ಲಿ-ಇಲ್ಲಿ ದಾಸ್ತಾನಾದ ಮರಳನ್ನು ಕದ್ದು ಅದನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅಕ್ರಮವಾಗಿ ಮರಳುಗಾರಿಕೆ ನಡೆಸುವುದು ಪರಿಸರಕ್ಕೆ ಮಾರಕ ಎಂಬ ಅರಿವಿದ್ದರೂ ಅವರು ಅದನ್ನು ಬಿಟ್ಟಿಲ್ಲ. `ಪರಿಸರ ನಾಶವಾದರೂ ಪರವಾಗಿಲ್ಲ. ತಾನೂ ದುಡ್ಡು ಮಾಡಬೇಕು’ ಎಂಬ ನಿಟ್ಟಿನಲ್ಲಿ ಅಶೋಕ ನಾಯಕ ಅವರು ತಮ್ಮ ಮರಳು ಲಾರಿ ಓಡಿಸುತ್ತಿದ್ದಾರೆ.
ಗೋವಾ ನೋಂದಣಿ ಲಾರಿಯಲ್ಲಿ ಅವರು ನಿರಂತರವಾಗಿ ಮರಳು ಕದ್ದು ಸಾಗಾಟ ಮಾಡುತ್ತಿದ್ದಾರೆ. ಅಶೋಕ ನಾಯಕ ಅವರ ಅವ್ಯವಹಾರದ ಮೇಲೆ ಇದೀಗ ಪೊಲೀಸರ ಕಣ್ಣು ಬಿದ್ದಿದೆ. ಜನವರಿ 19ರ ರಾತ್ರಿ ಅಶೋಕ ನಾಯಕ ಅವರು ಹೊನ್ನಾವರದ ಮೂಡ್ಕಣಿಯಿಂದ ಮರಳು ಸಾಗಾಟ ಮಾಡುವಾಗ ಪೊಲೀಸರು ಬೆನ್ನತ್ತಿದ್ದಾರೆ.
ಕುಮಟಾದಿಂದ ಅಂಕೋಲಾ ಕಡೆ ಹೊರಟಿದ್ದ ಅವರನ್ನು ಅವರದ್ದೇ ಊರಿನ ಹಿರೆಗುತ್ತಿ ಚೆಕ್ ಪೋಸ್ಟ್ ಬಳಿ ಗೋಕರ್ಣ ಪೊಲೀಸರು ತಡೆದಿದ್ದಾರೆ. ಗೋಕರ್ಣ ಪಿಸೈ ಶಶಿಧರ್ ಮರಳು ಲಾರಿ ತಪಾಸಣೆ ನಡೆಸಿದ್ದು, ಅಕ್ರಮ ನಡೆಸಿದ ಅಶೋಕ ನಾಯಕ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.