ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಉತ್ತರ ಕನ್ನಡದ ವ್ಯಕ್ತಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ಮೂಲದ `ಲಷ್ಕರ್ ಎ ತಯಾಬಾ’ ಎಂಬ ಉಗ್ರ ಸಂಘಟನೆಗೆ ಸೇರುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದ ಸಯ್ಯದ್ ಎಂ ಇದ್ರಿಸ್ ಮೇಲಿನ ಆರೋಪ ಸಾಭೀತಾಗಿದೆ.
ಈ ಹಿನ್ನಲೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ದೇಶದ್ರೋಹಿಗೆ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಜೊತೆಗೆ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಸಯ್ಯದ್ ಎಂ ಇದ್ರಿಸ್’ಗೆ ನ್ಯಾಯಾಲಯ 70 ಸಾವಿರ ರೂ ದಂಡವನ್ನು ವಿಧಿಸಿದೆ. ಕೊಲ್ಕತ್ತದ ವಿಶೇಷ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಪಶ್ಚಿಮ ಬಂಗಾಳ ಪೊಲೀಸರು ಸಯ್ಯದ್ ಎಂ ಇದ್ರಿಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣ ಎನ್ ಐ ಎ ತಂಡಕ್ಕೆ ವರ್ಗಾವಣೆ ಆಗಿದ್ದು, 2020ರಲ್ಲಿ ತನಿಖಾದಳದವರು ಆರೋಪಿಯನ್ನು ಬಂಧಿಸಿದ್ದರು. ಪಶ್ಚಿಮ ಬಂಗಾಳದ ಯುವಕರಿಗೆ ಆಮೀಷ ಒಡ್ಡಿ ಅವರನ್ನು ಲಷ್ಕರ್ ಸಂಘಟನೆಗೆ ಸೇರಿಸಿದ ಆರೋಪ ಸಯ್ಯದ್ ಇದ್ರಿಸ್ ವಿರುದ್ಧವಿದ್ದು, ಅದಕ್ಕೆ ಪೂರಕ ದಾಖಲೆಗಳು ಸಹ ಸಿಕ್ಕಿದ್ದವು.
ಆ ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರು ಮಾಡಿದ್ದರು. ನ್ಯಾಯಾಲಯ ಇದೀಗ ಆರೋಪಿಗೆ 10 ವರ್ಷ ಜೈಲು ಹಾಗೂ 70 ಸಾವಿರ ರೂ ದಂಡ ವಿಧಿಸಿದೆ. ಈ ಪ್ರಕರಣದಲ್ಲಿ ಇನ್ನಿಬ್ಬರು ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದು, ಅವರ ವಿರುದ್ಧ ರಾಷ್ಟ್ರೀಯ ತನಿಖಾ ದಳ ರೆಡ್ ಹಾಗೂ ಬ್ಲೂ ಕಾರ್ನ ನೋಟಿಸ್ ಜಾರಿ ಮಾಡಿದೆ.