ACF ಮಧನ ನಾಯಕ ಅವರನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಪ್ರಶಾಂತ ಲಮಾಣಿಗೆ 10 ವರ್ಷ ಜೈಲು ಹಾಗೂ 11 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
2012ರ ಅವಧಿಯಲ್ಲಿ ಮಧನ ನಾಯಕ ಅವರು ದಾಂಡೇಲಿಯಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಕುಟುಂಬಸಹಿತ ದಾಂಡೇಲಪ್ಪ ದೇಗುಲಕ್ಕೆ ಹೋಗಿದ್ದು, ಆ ಅವಧಿಯಲ್ಲಿ ಒಂದಷ್ಟು ಜನ ಮೊಸಳೆಗೆ ಮಾಂಸ ಎಸೆಯುತ್ತಿರುವುದನ್ನು ನೋಡಿದ್ದರು. ಮೊಸಳೆಗೆ ಮಾಂಸ ಎಸೆಯದಂತೆ ಮಧನ ನಾಯಕ ಅವರು ಪ್ರವಾಸಿಗರಿಗೆ ತಡೆದಿದ್ದು, ಇದನ್ನು ಸಹಿಸದ ಪ್ರವಾಸಿಗರು ಮಧನ ನಾಯಕ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದರು. ದಾಳಿ ನಂತರ ಮಧನ ನಾಯಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಆಕ್ರಮಣಕಾರರ ಬೆದರಿಕೆಗೆ ಹೆದರಿದ ಮಧನ ನಾಯಕ ಅವರು ಶೌಚಾಲಯದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರುವ ಬಗ್ಗೆ ಹೇಳಿಕೆ ನೀಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮಧನ ನಾಯಕ ಅವರು ಸಾವನಪ್ಪಿದ್ದರು. ಅದಾಗಿಯೂ, ವಿವಿಧ ಸಾಕ್ಷಿಗಳನ್ನು ಪರಿಗಣಿಸಿ ನ್ಯಾಯಾಲಯ ಕಲ್ಲು ತೂರಾಟ ನಡೆಸಿದ ಪ್ರಶಾಂತ ಲಮಾಣಿಗೆ ಶಿಕ್ಷೆ ಪ್ರಕಟಿಸಿದೆ. ಉಳಿದ ಆರೋಪಿತರಿಗೆ ದಂಡ ವಿಧಿಸಿದೆ.
2012ರ ಮೇ 6ರಂದು ಆನಂದ ರೂಪಸಿಂಗ ನಾಯಕ, ಸುರೇಶ ಶಂಕ್ರಪ್ಪ ನಾಯಕ, ಶೈಲಜಾ ಅರವಿಂದ ಬಾಬು ಚೌಹಾಣ, ಅರವಿಂದ ಬಾಬು ಕೃಷ್ಣಪ್ಪ ಚೌಹಾಣ, ಧನಬಾಯಿ ರೂಪಸಿಂಗ್ ನಾಯಕ್, ಕೆ ಮಾದುರಿ ಜಯಸಿಂಗ್ ರಾತೋಡ್, ರಾಧಾ ಸುರೇಶ ನಾಯಕ ಎಂಬಾತರು ದಾಂಡೇಲಿಗೆ ಬಂದಿದ್ದರು. ಅವರೆಲ್ಲರೂ ದಾಂಡೇಲಪ್ಪ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದು, ಕಾಳಿ ನದಿ ಅಂಚಿನ ಶಿವರಾಮ ಅಪ್ಪಾಜಿ ಪಾಟೀಲ ಅವರ ಶೆಡ್ಡಿನಲ್ಲಿ ಅಡುಗೆ ತಯಾರಿಸಿದ್ದರು. ಅಲ್ಲಿ ಊಟ ಮಾಡಿದ ನಂತರ ಮಾಂಸದ ತುಂಡುಗಳನ್ನು ಅಲ್ಲಿದ್ದ ಮೊಸಳೆಗಳಿಗೆ ಆಹಾರವಾಗಿ ನೀಡುತ್ತಿದ್ದರು. ಅದೇ ವೇಳೆ ಎಸಿಎಫ್ ಮಧನ ನಾಯಕ ಅವರು ಪತ್ನಿ ಸುಮತಿ ನಾಯಕ್ ಹಾಗೂ ಮಕ್ಕಳಾದ ಶಿಶಿರ ನಾಯಕ, ಮೇಘ ನಾಯಕ ಅವರ ಜೊತೆ ಅಲ್ಲಿಗೆ ಬಂದಿದ್ದು, ಮೊಸಳೆಗೆ ಆಹಾರ ನೀಡುವುದನ್ನು ತಡೆದರು. ಈ ವೇಳೆ ಶಿಶಿರ ನಾಯಕ ಅವರು ಫೋಟೋ ತೆಗೆದಿದ್ದು, ಆರೋಪಿತರು ಇದರಿಂದ ರೊಚ್ಚಿಗೆದ್ದರು.
ಆನಂದ ನಾಯಕ ಹಾಗೂ ಶೈಲಜಾ ನಾಯಕ ಸೇರಿ ಶಿಶಿರ ನಾಯಕ ಅವರನ್ನೇ ಮೊಸಳೆಗೆ ಆಹಾರವನ್ನಾಗಿ ನೀಡುವ ಬಗ್ಗೆ ಮಾತನಾಡಿದರು. ಕಾರಿನಲ್ಲಿ ಕೂರಲು ಹೊರಟ ಮಧನ ನಾಯಕ ಅವರನ್ನು ಎಳೆದು ತಂದು ಅವರ ಮೇಲೆ ಆಕ್ರಮಣ ನಡೆಸಿದರು. ಅವರನ್ನು ಬಿಡಿಸಲು ಹೋದ ಪತ್ನಿ ಸುಮತಿ ನಾಯಕ್ ಹಾಗೂ ಮೇಘಾ ನಾಯಕ ಅವರ ಮೇಲೆಯೂ ಧನಬಾಯಿ ನಾಯಕ ದಾಳಿ ಮಾಡಿದರು. ಅವರಿಬ್ಬರ ಜುಟ್ಟು ಹಿಡಿದು ಎಳೆದಾಡಿದ್ದರು. ಸುರೇಶ ನಾಯಕ ಅವರು ಮೇಘಾ ನಾಯಕ ಅವರನ್ನು ಹಿಡಿದು ಥಳಿಸಿದ್ದರು. ಅಲ್ಲಿಯೇ ಇದ್ದ ಶಿಶಿರ ನಾಯಕ ಅವರಿಗೆ ಆನಂದ ನಾಯಕ ಎಂಬಾತರು ಕೈ ಮಾಡಿದ್ದರು. ಕೆ ಮಾದುರಿ ಜಯಸಿಂಗ್ ರಾತೋಡ್, ರಾಧಾ ಸುರೇಶ ನಾಯಕ ಸಹ ಹೊಡೆದಾಟಕ್ಕೆ ಕೈ ಜೋಡಿಸಿದ್ದರು.
ಈ ಗಲಾಟೆಯಲ್ಲಿ ಪ್ರಶಾಂತ ಲಮಾಣಿ ಹಾಗೂ ಮಲ್ಲಿಕಾರ್ಜುನ ಚೌಹಾಣ್ ಸೇರಿ ಮಧನ ನಾಯಕ ಅವರ ಕಡೆ ಕಲ್ಲು ಬೀಸಿದ್ದರು. ಆ ಕಲ್ಲು ಮಧನ ನಾಯಕ ಅವರ ತಲೆಗೆ ತಾಗಿ ಅವರಿಗೆ ತಲೆ ಒಳಗೆ ಗಂಭೀರ ಪ್ರಮಾಣದಲ್ಲಿ ನೋವಾಗಿತ್ತು. ಈ ಹೊಡೆದಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಇಬ್ಬರು ಸರ್ಕಾರಿ ನೌಕರರಾಗಿದ್ದು, ಅವರು ಮಧನ ನಾಯಕ ಕುಟುಂಬದವರನ್ನು ಬೆದರಿಸಿದ್ದರು. ಸುಳ್ಳು ದೂರು ನೀಡುವುದಾಗಿ ಹೆದರಿಸಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಾಗಿದ್ದ ಮಧನ ನಾಯಕ ಅವರು `ಶೌಚಾಲಯದಿಂದ ಜಾರಿ ಬಿದ್ದು ನೋವಾಗಿದೆ’ ಎಂದು ಸುಳ್ಳು ಹೇಳಿದ್ದರು. 2012ರ ಡಿಸೆಂಬರ್ 6ರಂದು ಮಧನ ನಾಯ್ಕ ಅವರ ತಲೆಗೆ ಶಸ್ತçಚಿಕಿತ್ಸೆ ನಡೆಯಿತು. ಆದರೆ, ಅದನ್ನು ಅರಗಿಸಿಕೊಳ್ಳಲಾಗದೇ ಮೇ 8ರಂದು ರಾತ್ರಿ ಅವರು ಸಾವನಪ್ಪಿದರು.
ಈ ಪ್ರಕರಣ ಸಿಐಡಿ ತನಿಖೆಗೆ ಆದೇಶವಾಗಿದ್ದು, ಡಿವೈಎಸ್ಪಿ ಬಿಬಿ ಅಶೋಕಕುಮಾರ ಅವರು ತನಿಖಾಧಿಕಾರಿ ಆಗಿದ್ದರು. ಹೆಡ್ ಕಾನ್ಸಟೇಬಲ್ ಮಂಜು ಶೆಟ್ಟಿ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಶಿರಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ ಕಿಣಿ ಅವರು ಯಲ್ಲಾಪುರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಕರಣದಲ್ಲಿ ಸುಧೀರ್ಘವಾಗಿ ವಾದ ಮಂಡಿಸಿದರು. ಮಧನ ನಾಯಕ ಅವರ ಪುತ್ರಿ ಮೇಘಾ ನಾಯಕ ಅವರು ಜರ್ಮನಿಯಲ್ಲಿದ್ದು, ನ್ಯಾಯಾಧೀಶರು ವಿಡಿಯೋ ಕಾನ್ಪರೆನ್ಸ ಮೂಲಕ ಅವರ ಹೇಳಿಕೆಪಡೆದರು. 13 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದಿದ್ದು, ಶುಕ್ರವಾರ ತಮ್ಮ ಆದೇಶ ಪ್ರಕಟಿಸಿದರು. ಕಲ್ಲಿನಿಂದ ಹೊಡೆದವರ ಪೈಕಿ ಈಗಾಗಲೇ ಒಬ್ಬರು ಸಾವನಪ್ಪಿದ್ದು, ಬದುಕಿರುವ ಪ್ರಶಾಂತ ಲಮಾಣಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ ದಂಡ ಪಾವತಿಗೆ ಸೂಚಿಸಿದರು. ಅದರೊಂದಿಗೆ ಸಂತ್ರಸ್ತ ಕುಟುಂಬಕ್ಕೂ 50 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಉಳಿದ ಆರೋಪಿತರಿಗೆ ತಲಾ 1 ಸಾವಿರ ರೂ ದಂಡ ವಿಧಿಸಿದರು.
ವಾದ ಮಂಡಿಸಿದವರಿಗೆ ಅಭಿನಂದನೆ
ಅರಣ್ಯಾಧಿಕಾರಿ ಹತ್ಯೆ ಮಾಡಿದವರಿಗೆ ಶಿಕ್ಷೆ ದೊರೆತದಕ್ಕೆ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ ನ್ಯಾಯಾಲಯಕ್ಕೆ ಆಗಮಿಸಿ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರನ್ನು ಸನ್ಮಾನಿಸಿದರು. `ಅರಣ್ಯಾಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸವಾಲುಗಳನ್ನು ಮೆಟ್ಟಿ ನಿಂತು ಮುನ್ನಡೆಯಬೇಕು’ ಎಂದು ರಾಜೇಶ ಮಳಗಿಕರ್ ಅವರು ಸಲಹೆ ನೀಡಿದರು. ಮಧನ ನಾಯಕ ಅವರ ಪತ್ನಿ ಸುಮತಿ ನಾಯಕ ಹಾಗೂ ಪುತ್ರ ಶಶೀರ ನಾಯಕ ಸಹ ಸರ್ಕಾರಿ ಅಭಿಯೋಜಕರಿಗೆ ಕೃತಜ್ಞತೆ ಸಲ್ಲಿಸಿ ಭಾವುಕರಾದರು.