ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯರ ಜೀಟಿ ಇಲ್ಲದೇ ಔಷಧ ವಿತರಿಸಿದ ಮೂರು ಔಷಧ ಮಳಿಗೆಗಳಿಗೆ ಬೀಗ ಬಿದ್ದಿದೆ. ಅಂಕೋಲಾ, ಕಾರವಾರ ಮತ್ತು ಮಿರ್ಜಾನ್’ನ ಒಂದೊoದು ಔಷಧ ಮಳಿಗೆಯ ಲೈಸನ್ಸನ್ನು ಅಧಿಕಾರಿಗಳು ಅಮಾನತು ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಮಾಹಿತಿ ನೀಡಿದ್ದಾರೆ. ಔಷಧ ಮಳಿಗೆಗಳಲ್ಲಿ ವೈದ್ಯರ ಸಲಹಾ ಚೀಟಿ ಇಲ್ಲದೇ ಔಷಧಗಳನ್ನು ವಿತರಣೆ ಮಾಡದಂತೆ ಅವರು ಸೂಚನೆ ನೀಡಿದ್ದು, ಈ ಬಗ್ಗೆ ತಪಾಸಣೆ ನಡೆಸುವಂತೆಯೂ ಜಿಲ್ಲಾ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದ್ದಾರೆ. ಮಾದಕ ವಸ್ತುಗಳ ಬಳಕೆ ಮತ್ತು ಸಿಂಥೇಟಿಕ್ ಡ್ರಗ್ ತಯಾರಿಕೆ ಕುರಿತಂತೆ ಅನುಮಾನಾಸ್ಪದ ಸ್ಥಳಗಳಲ್ಲಿ ವ್ಯಾಪಕ ತಪಾಸಣೆ ನಡೆಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ 18-30 ವರ್ಷದವರು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಬಳಕೆ ಮಾಡಿದ್ದಾರೆ. ಈ ಹಿನ್ನಲೆ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸಬೇಕು. ಡ್ರಗ್ ಸೇವನೆಯಲ್ಲಿ ಪತ್ತೆಯಾಗಿ ಚಿಕಿತ್ಸೆ ಪಡೆದವರ ಬಗ್ಗೆ ಪ್ರತ್ಯೇಕ ದಾಖಲಾತಿ ನಿರ್ವಹಿಸಿ, ಅವರು ಸಂಪೂರ್ಣವಾಗಿ ಈ ವ್ಯಸನದಿಂದ ಬಿಡುಗಡೆ ಮಾಡಿಸಬೇಕು’ ಎಂದವರು ಹೇಳಿದ್ದಾರೆ. `ರಾಸಾಯನಿಕ ವಸ್ತುಗಳನ್ನು ಬಳಸಿ ಡ್ರಗ್ಸ್ ತಯಾರು ಮಾಡುವುದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನಿಷೇಧಿತ ಮತ್ತು ಡ್ರಗ್ಸ್ ತಯಾರಿಕೆಗೆ ಬಳಸುವ ರಾಸಾಯನಿಕಗಳನ್ನು ಖರೀದಿಸುವವರ ಬಗ್ಗೆ ಅಧಿಕಾರಿಗಳು ಗಮನಿಸಬೇಕು. `ಶೆಡ್‌ಗಳನ್ನು ಮರೆಮಾಡಿ ಲ್ಯಾಬ್ ಮಾದರಿಯಲ್ಲಿ ಡ್ರಗ್ಸ್ ತಯಾರಿಕೆ ಮಾಡುವ ಸಾಧ್ಯತೆಗಳಿದ್ದು, ರೆಸಾರ್ಟ್ ಮತ್ತು ಹೋಂ ಸ್ಟೇ ಗಳಲ್ಲಿ ಮಾದಕ ವಸ್ತುಗಳ ಸರಬರಾಜು ನಡೆಯದಂತೆ ಎಚ್ಚರಿಕೆವಹಿಸಬೇಕು’ ಎಂದು ಸೂಚಿಸಿದ್ದಾರೆ.
`ಮೀನುಗಾರಿಕಾ ಬಂದರು, ಪೋರ್ಟ್ ಮತ್ತು ಬೀಚ್ ನಲ್ಲಿ ಮಾದಕ ವಸ್ತುಗಳ ಸರಬರಾಜು ಮತ್ತು ಸೇವನೆ ಕುರಿತಂತೆ ಹೆಚ್ಚಿನ ತಪಾಸಣೆ ನಡೆಸಬೇಕು. ಅಂಚೆ ಇಲಾಖೆಯಲ್ಲಿ ಸ್ವೀಕೃತವಾಗುವ ಅನುಮಾನಾಸ್ಪದ ಪಾರ್ಸೆಲ್ ಗಳನ್ನು ತಪಾಸಣೆ ನಡೆಸಲು ಪೊಲೀಸ್ ಶ್ವಾನದಳದ ನೆರವುಪಡೆಯಬೇಕು. ಪೊಲೀಸ್, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಅಬಕಾರಿ, ಮೀನುಗಾರಿಕೆ, ಬಂದರು ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಸೂಚಿಸಿದ್ದಾರೆ. ಈ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಎನ್, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸ್, ಅಬಕಾರಿ, ಮೀನುಗಾರಿಕೆ, ಬಂದರು, ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.