ಶಿರಸಿ ಜಾತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸದೇ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರಿಗೆ ಸಚಿವ ಮಂಕಾಳು ವೈದ್ಯ ಸಮಾಧಾನ ಮಾಡಿದ್ದಾರೆ. ಹೀಗಾಗಿ ಸದ್ಯದ ಮಟ್ಟಗೆ ಉಪವಾಸ ಸತ್ಯಾಗ್ರಹವನ್ನು ಮುಂದೂಡಿರುವುದಾಗಿ ಅನಂತಮೂರ್ತಿ ಹೆಗಡೆ ಘೋಷಿಸಿದ್ದಾರೆ.
`ಪ್ರಸಿದ್ಧ ಶಿರಸಿ ಜಾತ್ರೆಗೆ ಸಂಬoಧಿಸಿ ಬರುವ ಭಕ್ತಾದಿಗಳಿಗೆ ವಸತಿ, ಊಟ, ನೀರು ಒಳಗೊಂಡ ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ಅನಂತಮೂರ್ತಿ ಹೆಗಡೆ ಅವರು ಆಗ್ರಹಿಸಿದ್ದರು. ತಮ್ಮ ಬೇಡಿಕೆ ಈಡೇರಿಕೆಗಾಗಿ ಫೆ 3ರಂದು ಧರಣಿ ನಡೆಸುವುದಾಗಿ ಅವರು ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಹಾಗೂ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಅನಂತಮೂರ್ತಿ ಹೆಗಡೆ ಈ ಕುರಿತು ಪತ್ರ ನೀಡಿದರು. ಈ ವೇಳೆ ಸಚಿವ ಮಂಕಾಳು ವೈದ್ಯ ಅವರು ಅನಂತಮೂರ್ತಿ ಹೆಗಡೆ ಅವರನ್ನು ಸಮಾಧಾನ ಮಾಡಿದರು.
ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಅನಂತಮೂರ್ತಿ ಹೆಗಡೆ ಮಾತನಾಡಿ ತಮ್ಮ ಬೇಡಿಕೆ ಮಂಡಿಸಿದರು. `ಜಾತ್ರಾ ಆರಂಭವಾಗುವುದರೊಳಗೆ ವ್ಯಾಪಾರಿಗಳು, ಭಕ್ತಾದಿಗಳನ್ನು ಒಳಗೊಂಡು ಸರ್ವರಿಗೂ ಅನುಕೂಲವಾಗುವಂತೆ ಎಲ್ಲ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮಂಕಾಳು ವೈದ್ಯ ಅವರು ಘೋಷಿಸಿದರು. `ಸಚಿವರ ಮಾತಿನ ಮೇಲೆ ವಿಶ್ವಾಸವಿರಿಸಿ ಸದ್ಯಕ್ಕೆ ಫೆ 3ರ ಪ್ರತಿಭಟನೆ ಹಿಂಪಡೆಯಲಾಗಿದೆ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.