ಕುಮಟಾದ ಸಂತೆ ಮಾರುಕಟ್ಟೆ ಸಂಪೂರ್ಣವಾಗಿ ಸರಾಯಿ ಬಾಟಲಿಗಳಿಂದ ಕೂಡಿದೆ. ಸಂತೆ ಮಾರುಕಟ್ಟೆ ಒಳಗೆ ಪ್ರವೇಶಿಸುತ್ತಲೇ ಎಲ್ಲೆಂದರಲ್ಲಿ ಕಸ ಹಾಗೂ ಸರಾಯಿ ಬಾಟಲಿಗಳು ಕಾಣಿಸುತ್ತಿವೆ.
ಪ್ರತಿ ಬುಧವಾರ ಕುಮಟಾದಲ್ಲಿ ಸಂತೆ ನಡೆಯುತ್ತಿದೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸಾವಿರಾರು ಜನ ಆಗಮಿಸಿ ತಮ್ಮ ನೆಚ್ಚಿನ ತರಕಾರಿ ಖರೀದಿಸುತ್ತಾರೆ. ಸುತ್ತಲಿನ ರೈತರ ಜೊತೆ ಬೇರೆ ಬೇರೆ ಜಿಲ್ಲೆಯ ರೈತರು ಆ ದಿನ ಇಲ್ಲಿಗೆ ಆಗಮಿಸಿ ವ್ಯಾಪಾರ ಮಾಡುತ್ತಾರೆ. ವ್ಯಾಪಾರ-ವಹೀವಾಟು ನಡೆಯುವ ಸ್ಥಳಕ್ಕೆ ಸ್ಥಳೀಯ ಆಡಳಿತ ಬಾಡಿಗೆ ವಸೂಲಿ ಮಾಡುತ್ತಿದ್ದರೂ ಅಲ್ಲಿನ ಸ್ವಚ್ಛತೆಗೆ ಗಮನ ಕೊಟ್ಟಿಲ್ಲ.
ಎಲ್ಲೆಂದರಲ್ಲಿ ಸರಾಯಿ ಬಾಟಲಿಗಳ ಜೊತೆ ಪ್ಲಾಸ್ಟಿಕ್ ತ್ಯಾಜ್ಯವೂ ಸಂತೆ ಮಾರುಕಟ್ಟೆ ಆವರಣವನ್ನು ತುಂಬಿದೆ. ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಹಾಗೂ ಸುಧಾಕರ ನಾಯ್ಕ ಈ ವಿಷಯವನ್ನು ಮಾಧ್ಯಮದವರ ಗಮನಕ್ಕೆ ತಂದಿದ್ದಾರೆ. ಆ ಪ್ರದೇಶದಲ್ಲಿ ಜಾನುವಾರುಗಳು ಸಹ ಪ್ಲಾಸ್ಟಿಕ್ ತ್ಯಾಜ್ಯ ಸೇವಿಸುತ್ತಿರುವುದನ್ನು ಅವರು ಪ್ರಸ್ತಾಪಿಸಿದ್ದು, ಸ್ವಚ್ಛತೆ ಕಾಪಾಡುವಂತೆ ಆಗ್ರಹಿಸಿದ್ದಾರೆ. `ಕೆಲ ಗೂಡಂಗಡಿಗಳಲ್ಲಿ ಅನಧಿಕೃತ ಸರಾಯಿ ಮಾರಾಟ ನಡೆಯುತ್ತಿದೆ’ ಎಂದು ಅವರು ದೂರಿದ್ದಾರೆ.