ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿ ಪರಾರಿಯಾಗಿದ್ದ ವ್ಯಕ್ತಿಯೊಬ್ಬ 22 ವರ್ಷಗಳ ನಂತರ ಸಿಕ್ಕಿಬಿದ್ದಿದ್ದು, ಆತನನ್ನು ಶಿರಸಿ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆರೋಪಿ ನೀಲಪ್ಪ ಅಗಸೆಬಾಗಿಲು ಅವರು ಹಣಕಾಸು ವಂಚನೆ ಪ್ರಕರಣದಲ್ಲಿಯೂ ಜೈಲು ಸೇರಿದ್ದಾರೆ.
ಶಿರಸಿ ಎಕ್ಕಂಬಿಯ ನೀಲಪ್ಪ ಮಲ್ಲಪ್ಪ ಅಗಸೆಬಾಗಿಲು ಅವರು 2003ರಲ್ಲಿ ಮಹಿಳೆಯೊಬ್ಬರ ಮೇಲೆ ಕೈ ಮಾಡಿದ್ದರು. ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದರು. ಜೊತೆಗೆ ಅವರ ಮಾನಭಂಗದ ಪ್ರಯತ್ನ ಮಾಡಿದ್ದರು. ಈ ಹಿನ್ನಲೆ ಸಂತ್ರಸ್ತೆ ಪೊಲೀಸರ ಮೊರೆ ಹೋಗಿದ್ದು, ಆ ವೇಳೆಯಲ್ಲಿಯೇ ಪೊಲೀಸರು ನೀಲಪ್ಪ ಅಗಸೆಬಾಗಿಲು ಅವರನ್ನು ಬಂಧಿಸಿದ್ದರು. ನ್ಯಾಯಾಲಯದಿಂದ ಜಾಮೀನುಪಡೆದು ಹೊರ ಬಂದಿದ್ದ ನೀಲಪ್ಪ ಅಗಸೆಬಾಗಿಲು ಅವರು ಅದಾದ ನಂತರ ಚೆಕ್ ಬೌನ್ಸ ಪ್ರಕರಣವೊಂದರಲ್ಲಿಯೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಅವಧಿಯಲ್ಲಿಯೂ ಜಾಮೀನುಪಡೆದು ಹೊರಬಂದ ಅವರು ನಂತರ ನ್ಯಾಯಾಲಯದ ಕಡೆ ಮುಖ ಹಾಕಿರಲಿಲ್ಲ.
ಮಹಿಳಾ ದೌರ್ಜನ್ಯ ಹಾಗೂ ಚೆಕ್ ಬೌನ್ಸ್ ಪ್ರಕರಣದ ವಿಷಯವಾಗಿ ನ್ಯಾಯಾಲಯ ಸಾಕಷ್ಟು ಬಾರಿ ವಾರೆಂಟ್ ಹೊರಡಿಸಿತ್ತು. ಆದರೆ, ನೀಲಪ್ಪ ಅಗಸೆಬಾಗಿಲು ಅವರು ಪೊಲೀಸರ ಕೈಗೆ ಸಿಕ್ಕಿರಲಿಲ್ಲ. 22 ವರ್ಷಗಳಿಂದ ಪೊಲೀಸರು ನೀಲಪ್ಪ ಅವರ ಹುಡುಕಾಟ ನಡೆಸಿದ್ದು, ಡಿಸೆಂಬರ್ 31ರಂದು ಶಿರಸಿ ಮಾರುಕಟ್ಟೆ ಪಿಸೈ ಬಸವರಾಜ ಕನಶೆಟ್ಟಿ ಅವರಿಗೆ ನೀಲಪ್ಪ ಅಗಸೆಬಾಗಿಲು ಅವರು ಬೆಂಗಳೂರಿನಲ್ಲಿರುವ ವಿಷಯ ಗೊತ್ತಾಯಿತು. ಪೊಲೀಸ್ ಇಲಾಖೆಯ ತಾಂತ್ರಿಕ ಸಿಬ್ಬಂದಿ ಬಬನ ಕದಂ ಹಾಗೂ ಉದಯ ಗುನಗಾ ಅವರ ಸಹಾಯಪಡೆದು ಪಿಸೈ ಬಸವರಾಜ ಕನಶೆಟ್ಟಿ ಅವರು ವಿಶೇಷ ಕಾರ್ಯಾಚರಣೆ ನಡೆಸಿದರು.
ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ, ಸಂದೀಪ ನಿಂಬಾಯಿ, ರಮೇಶ ಮುಚ್ಚಂಡಿ ಜೊತೆ ಸೇರಿ ನೀಲಪ್ಪ ಅಗಸೆಬಾಗಿಲು ಅವರ ಹುಡುಕಾಟಕ್ಕೆ ಬಲೆ ಬೀಸಿದರು. ಆ ಬಲೆಗೆ ಬಿದ್ದ ಆರೋಪಿಯನ್ನು ಶಿರಸಿಗೆ ಕರೆತಂದು ಜನವರಿ 1ರಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆ ಮೂಲಕ `ತಪ್ಪು ಮಾಡಿದ ಯಾರೂ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪೊಲೀಸರು ಸಂದೇಶ ಸಾರಿದ್ದಾರೆ.