`ಕಂದಾಯ, ಪೊಲೀಸ್ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಹೆಸರು ದುರುಪಯೋಗಪಡಿಸಿಕೊಂಡು ಅನೇಕರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ. ಅಕ್ರಮದ ವಿರುದ್ಧ ದೂರು ನೀಡಿದರೂ ಅಧಿಕಾರಿಗಳು ಕ್ರಮ ಜರುಗಿಸದಿರುವುದು ಅನುಮಾನಕ್ಕೆ ಕಾರಣ’ ಎಂದು ಯಲ್ಲಾಪುರ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಹೇಳಿದ್ದಾರೆ.
`ಯಲ್ಲಾಪುರ ತಾಲೂಕಿನಲ್ಲಿ ಎಲ್ಲೆಂದರಲ್ಲಿ ಮರಳು ಗುಡ್ಡೆ ಕಾಣಿಸುತ್ತಿದೆ. ಕರಾವಳಿ ಭಾಗದಿಂದ ರಾತ್ರಿ ವೇಳೆ ಮರಳು ಬರುತ್ತಿದೆ. ನಸುಕಿನ ಅವಧಿಯಲ್ಲಿ ಮರಳು ಲಾರಿಗಳು ಯಲ್ಲಾಪುರ ಪ್ರವೇಶಿಸುತ್ತಿದ್ದು, ಈ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಲಾರಿ ಹಿಡಿದಿಲ್ಲ. ಮರಳು ಮಾರಾಟಗಾರರು ಸಹ ಪೊಲೀಸ್, ಕಂದಾಯ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಹೆಸರು ಹೇಳಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. 15-17 ಸಾವಿರ ರೂಪಾಯಿಗೆ ಸಿಗಬೇಕಿದ್ದ ಮರಳನ್ನು 30-35 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ’ ಎಂದವರು ಆರೋಪಿಸಿದ್ದಾರೆ.
`ಕಟ್ಟಡ ನಿರ್ಮಾಣ ಕೆಲಸಕ್ಕಾಗಿ ಬಡವರು ಮರಳು ಬಯಸುತ್ತಿದ್ದು, ಕೆಲವರು ಅದನ್ನೇ ಬಂಡವಾಳವನ್ನಾಗಿಸಿಕೊoಡಿದ್ದಾರೆ. ಅಧಿಕಾರಿಗಳ ಹೆಸರಿನಲ್ಲಿ ದುಡ್ಡು ಹೋಗುತ್ತಿದ್ದರೂ ಅದನ್ನು ಕೇಳುವವರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ. `ಅಕ್ರಮ ಮರಳುಗಾರಿಕೆಯ ಸಮಸ್ಯೆಗಳ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗಿದೆ. ಪೊಲೀಸರಿಗೆ ಸಹ ಮಾಹಿತಿ ಕೊಡಲಾಗಿದೆ. ಅದಾಗಿಯೂ ಯಾವುದೇ ಕ್ರಮವಾಗಿಲ್ಲ’ ಎಂದು ಸೋಮೇಶ್ವರ ನಾಯ್ಕ ಅಸಮಧಾನಹೊರ ಹಾಕಿದ್ದಾರೆ. ಇನ್ನೂ ಒಂದು ವಾರದ ಒಳಗೆ ಅಕ್ರಮ ಮರಳುಗಾರಿಕೆ ತಡೆಯದೇ ಇದ್ದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿಯೂ ಸೋಮೇಶ್ವರ ನಾಯ್ಕ ಅವರು ಎಚ್ಚರಿಸಿದ್ದಾರೆ.