ಆನ್‌ಲೈನ್ ಉದ್ಯೋಗಕ್ಕೆ ಆಸೆಪಟ್ಟ ಕಾರವಾರದ ಅಮೃತ ಕೋಳಂಬಕರ್ ಅವರು 26 ಲಕ್ಷ ರೂ ಕಳೆದುಕೊಂಡಿದ್ದಾರೆ. ಅವರಿಗೆ ಉದ್ಯೋಗವೂ ಸಿಕ್ಕಿಲ್ಲ. ಕೊಟ್ಟ ಕಾಸನ್ನು ಹಿಂಪಡೆಯಲು ಸಾಧ್ಯವಾಗಿಲ್ಲ.
ಕಾರವಾರದಬಾಡ ನಂದನಗದ್ದಾದ ಪಾದ್ರಿಭಾಗ ಕ್ರಾಸಿನ ಬಳಿ ಅಮೃತ ಕೋಳಂಬಕರ್ ಅವರು ವಾಸವಾಗಿದ್ದಾರೆ. ಅವರು ಆನ್‌ಲೈನ್ ಮೂಲಕ ಉದ್ಯೋಗ ಹುಡುಕಾಟದಲ್ಲಿದ್ದಾಗ ಅದೇ ವಿಷಯದ ಜಾಹೀರಾತೊಂದು ಅವರಿಗೆ ಕಾಣಿಸಿದೆ. ಆ ಬಗ್ಗೆ ಅವರು ಆಸಕ್ತರಾಗಿ ಜಾಹೀರಾತು ಬಗ್ಗೆ ವಿಚಾರಿಸಿದ್ದಾರೆ.
2025ರ ಸೆಪ್ಟೆಂಬರ್ 10ರಂದು ವಾಟ್ಸಪ್ ಮೂಲಕ ವಂಚಕರು ಅಮೃತ ಕೋಳಂಬಕರ್ ಅವರನ್ನು ಸಂಪರ್ಕಿಸಿದ್ದಾರೆ. ಆನ್ ಲೈನ್ ಮೂಲಕ ಪಾರ್ಟ ಟೈಂ ಉದ್ಯೋಗ ಮಾಡಿ ಹಣ ಸಂಪಾದಿಸಲು ಸಾಧ್ಯ ಎಂದವರು ವಿವರಿಸಿದ್ದಾರೆ. `ಆನ್ ಲೈನ್ ಮೂಲಕ ವಿವಿಧ ಉತ್ಪನ್ನಗಳಿಗೆ ರಿವ್ಯು ಬರೆದರೆ ಹಣ ಕೊಡುತ್ತೇವೆ’ ಎಂದು ನಂಬಿಸಿದ್ದಾರೆ.
ಅಮೃತ ಕೋಳಂಬಕರ್ ಅವರಿಗೆ ಈ ವೇಳೆ ಆನ್‌ಲೈನ್ ಮೂಲಕವೇ ಕಾವ್ಯ ಹಾಗೂ ಗಿರೀಶ್ ರಾಮಕೃಷ್ಣ ಎಂಬಾತರು ಪರಿಚಿತರಾಗಿದ್ದು, ಅವರು ಹೇಳಿದಂತೆ ಅಮೃತ ಕೋಳಂಬಕರ್ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಅಮೃತ ಕೋಳಂಬಕರ್ ಅವರ ಖಾತೆಗೆ 1500ರೂ ಹಣ ಜಮಾ ಆಗಿದೆ.
ಅದಾದ ನಂತರ `ನಾವು ಹೇಳಿದ ಕಡೆ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಕೊಡುತ್ತೇವೆ’ ಎಂದು ಕಾವ್ಯ ಎಂಬಾತರು ನಂಬಿಸಿದ್ದಾರೆ. ಆ ಮಾತು ಕೇಳಿ ಅಮೃತ ಕೋಳಂಬಕರ್ ಅವರು 10 ಸಾವಿರ ರೂ ಹೂಡಿಕೆ ಮಾಡಿದ್ದಾರೆ. ಅದಕ್ಕೆ ಅವರಿಗೆ 15 ಸಾವಿರ ರೂ ದೊರೆತಿದೆ. ಅದಾದ ನಂತರ 26 ಲಕ್ಷ ರೂ ಹೂಡಿಕೆ ಮಾಡಿದ್ದಾರೆ. ಆ ವೇಳೆ ಅವರಿಗೆ ಲಾಭವೂ ಸಿಕ್ಕಿಲ್ಲ. ಕೊಟ್ಟ ಹಣವೂ ಮರಳಿ ಬಂದಿಲ್ಲ.