ಹೊನ್ನಾವರಕ್ಕೆ ವರ್ಗವಾಗಿರುವ ಪಿಸೈ ಮಹಾಂತೇಶ ವಾಲ್ಮಿಕಿ ಅವರು ಅಲ್ಲಿನ ಅಕ್ರಮ ಆಟಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದಾರೆ.
ಒಂದು ವಾರದ ಹಿಂದೆ ಹೊನ್ನಾವರ ಪಿಸೈ ಆಗಿ ಅಧಿಕಾರವಹಿಸಿಕೊಂಡ ಮಹಾಂತೇಶ ವಾಲ್ಮೀಕಿ ಅವರು ಅಲ್ಲಿನ ಆಗು-ಹೋಗುಗಳ ಅಧ್ಯಯನ ಮಾಡಿದ್ದಾರೆ. ಮಟ್ಕಾ, ಅಕ್ರಮ ಮರಳುಗಾರಿಕೆಯ ವಿರುದ್ಧ ಅವರು ಕಾನೂನು ಕ್ರಮ ಜರುಗಿಸಿದ್ದಾರೆ. ಹೊನ್ನಾವರ ಕರ್ಕಿಯ ರಾಮೇಶ್ವರಕಂಬಿ ಬಳಿ ವ್ಯಾಪಾರಿ ಮಟ್ಕಾ ಆಡಿಸುತ್ತಿರುವುದನ್ನು ಅರಿತು ಅಲ್ಲಿ ದಾಳಿ ಮಾಡಿದ್ದಾರೆ. ಅದಾದ ನಂತರ ಕಾಸರಕೋಡು ತೊಪ್ಪಲಿನ ಚಾಲಕ ಪ್ರಕಾಶ ಶ್ರೀನಿವಾಸ ಪುರಾಣಿಕ ಅವರು ಅಕ್ರಮ ಮರಳುಗಾರಿಕೆ ನಡೆಸುತ್ತಿರುವುದಕ್ಕೂ ತಡೆ ಒಡ್ಡಿದ್ದಾರೆ.
ಜನವರಿ 29ರಂದು ಹೊನ್ನಾವರ ಕರ್ಕಿ ರಾಮೇಶ್ವರಕಂಬಿ ಬಳಿ ಅಶೋಕ ನಾಯ್ಕ ಅವರು 1 ರೂಪಾಯಿಗೆ 80ರೂ ಕೊಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸುತ್ತಿದ್ದರು. ವ್ಯಾಪಾರಿಯಾಗಿರುವ ಅವರು ಮಟ್ಕಾ ಚೀಟಿ ವ್ಯವಹಾರವನ್ನು ನಡೆಸುತ್ತಿದ್ದರು. ಕರ್ಕಿ ಗ್ರಾಮದ ದೇವೇಂದ್ರ ಕಾಂಪ್ಲೇಕ್ಸಿನ ಪಕ್ಕದ ಬೇಲೆಗದ್ದೆ ಕೇರಿ ಬಳಿ ನಿಂತಿದ್ದ ಅಶೋಕ ನಾಯ್ಕ ಅವರ ಮೇಲೆ ಮಹಾಂತೇಶ ವಾಲ್ಮೀಕಿ ಅವರು ದಾಳಿ ಮಾಡಿದರು. ಆ ದಿನ ಅವರು ಸಂಗ್ರಹಿಸಿದ್ದ 750ರೂ ಹಣದ ಜೊತೆ ಬಾಲ್ ಪೆನ್ನು ಸೇರಿ ವಿವಿಧ ಪರಿಕ್ಕರಗಳನ್ನ ವಶಕ್ಕೆಪಡೆದರು.
ಜನವರಿ 30ರಂದು ನಸುಕಿನ 2 ಗಂಟೆ ಅವಧಿಯಲ್ಲಿ ನದಿ ತೀರದ ಕಡೆಯಿಂದ ಬರುವ ಲಾರಿಗಳಿಗೆ ಜನ ಅಡ್ಡಲಾಗಿ ಕೈ ಮಾಡಿದ್ದಾರೆ. ಆ ಲಾರಿಯನ್ನು ಜನ ಪೊಲೀಸ್ ಠಾಣೆಗೆ ಕರೆತಂದಿದ್ದು, ಮಹಂತೇಶ ವಾಲ್ಮೀಕಿ ಅವರು ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿ ಚಾಲಕ ಪ್ರಕಾಶ ಪುರಾಣಿಕ್ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ. ಕವಲಕ್ಕಿಯ ಲೆಕ್ಕಪರಿಶೋಧಕ ಶಶಾಂಕ ವೆಂಕಟ್ರಮಣ ಹೆಗಡೆ ಹಾಗೂ ತಾರಿಕೆರೆಯ ವಿನಾಯಕ ನಾರಾಯಣ ಹೆಗಡೆ ಅವರ ನೆರವಿನಿಂದ ಮರಳನ್ನು ಜಪ್ತು ಮಾಡಿದ್ದಾರೆ.