ಹಿಂದು ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್ ಯಶಸ್ವಿಯಾಗಿದೆ. ರಂಜಿತಾ ಕೊಲೆ ಖಂಡಿಸಿ 500ಕ್ಕೂ ಅಧಿಕ ಜನ ಮೌನಾಚರಣೆ ಮಾಡಿದ್ದು, ಕೃತ್ಯವನ್ನು ಖಂಡಿಸಿದ್ದಾರೆ.
ಯಲ್ಲಾಪುರದ ಬಸವೇಶ್ವರ ವೃತ್ತದಲ್ಲಿ ಸೇರಿದ ಜನ ಶೋಕವ್ಯಕ್ತಪಡಿಸಿದರು. ರಂಜಿತಾರನ್ನು ಕೊಂದ ರಫೀಕ್ ನಿಲುವನ್ನು ಖಂಡಿಸಿದರು. ಆ ವೇಳೆಗಾಗಲೇ ರಫೀಕ್ ಆತ್ಮಹತ್ಯೆಗೆ ಶರಣಾದ ಸುದ್ದಿ ಬಂದಿದ್ದರೂ ಜನ ಪ್ರತಿಭಟನೆ ಹಿಂಪಡೆಯಲಿಲ್ಲ. `ಭವಿಷ್ಯದಲ್ಲಿ ಈ ಬಗೆಯ ಕೃತ್ಯ ಮರುಕಳಿಸದ ಹಾಗೇ ಕಠಿಣ ಕಾನೂನು ಬರಬೇಕು’ ಎಂದು ಆಗ್ರಹಿಸಿ ಜನ ಧರಣಿ ನಡೆಸಿದರು.
ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿಯ ಬಾಗಿಲು ಮುಚ್ಚಿದ್ದರು. ಪ್ರತಿಭಟನೆಯ ವೇಳೆ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿರುವ ವಿಷಯ ಬಂದಿದ್ದು, ಪ್ರತಿಭಟನಾಕಾರರು ಅದನ್ನು ವಿರೋಧಿಸಿದರು. ಅದಾದ ಕೆಲ ಕ್ಷಣದಲ್ಲಿ ಮೀನು ಮಾರುಕಟ್ಟೆಯೂ ಬಂದ್ ಆಯಿತು. ಪ್ರತಿಭಟನೆಯ ಕಾವು ಏರಿದ್ದರೂ ವಾಹನ ಸಂಚಾರಕ್ಕೆ ಸಮಸ್ಯೆ ಆಗಲಿಲ್ಲ. ಶಾಂತಿಯುತ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿದ್ದು, ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ನೇತ್ರತ್ವದಲ್ಲಿ ನೂರಾರು ಪೊಲೀಸರು ಭದ್ರತೆಯಲ್ಲಿದ್ದರು.
ಪ್ರತಿಭಟನೆಯಲ್ಲಿ ಭಾಷಣ ಮಾಡಿದ ಕೆಲ ಮುಖಂಡರು ಈ ಘಟನೆಗೆ ರಾಜಕೀಯ ಬಣ್ಣ ಲೇಪಿಸಿದರು. ಬಿಜೆಪಿ ಪ್ರಮುಖರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. `ಕಾಂಗ್ರೆಸ್ ಆಡಳಿತ ಬಂದ ನಂತರ ಇಂಥ ಘಟನಾವಳಿಗಳು ಹೆಚ್ಚಾಗಿದೆ’ ಎಂದು ಭಾಷಣಕಾರರು ದೂರಿದರು. ಕೆಲವರು ಈ ಮಾತನ್ನು ಒಪ್ಪಿದರು. ಇನ್ನೂ ಕೆಲವರು ಸಾವಿನ ವಿಷಯದಲ್ಲಿ ರಾಜಕೀಯ ಬೇಡ ಎನ್ನುತ್ತಿದ್ದರು. `ಹಿಂದು ಧರ್ಮದ ಮೇಲೆ ನಡೆಯುವ ಆಕ್ರಮಣ ನಿಲ್ಲಬೇಕು’ ಎಂದು ಪ್ರತಿಭಟನಾಕಾರರು ಧ್ವನಿಗೂಡಿಸಿದರು.
`ಬಿಜೆಪಿ ರಾಜ್ಯ ಅಧ್ಯಕ್ಷರು ರಂಜಿತಾ ಅವರ ಮನೆಗೆ ಭೇಟಿ ನೀಡಲಿದ್ದು, ಕಾಂಗ್ರೆಸ್ ಪ್ರಮುಖರು ಬಂದು ನ್ಯಾಯ ಒದಗಿಸಬೇಕು’ ಎಂದು ಬಿಜೆಪಿಗರು ಆಗ್ರಹಿಸಿದರು. ಭಾನುವಾರ ಯಲ್ಲಾಪುರದಲ್ಲಿ ನಡೆಯಬೇಕಿದ್ದ ಸಂತೆಯೂ ದಿಢೀರ್ ಆಗಿ ರದ್ದಾಗಿದ್ದು, ವ್ಯಾಪಾರಿಗಳು ಪಟ್ಟಣದ ಹೊರಭಾಗದಲ್ಲಿ ವ್ಯಾಪಾರ ಮಾಡಿದರು. ಹಳಿಯಾಳ ಕ್ರಾಸಿನ ಬಳಿ ಕೆಲವರು ತರಕಾರಿ ಮಾರಾಟ ಮಾಡಿ ಮನೆ ಸೇರಿದರು.