ಉತ್ತರ ಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕವಾಗಿ ಹರಿಯುವ ನದಿಯನ್ನು ಬೇರೆಡೆ ತಿರುಗಿಸಿದರೆ ಅದರಿಂದ ಅನೇಕ ದುಷ್ಪರಿಣಾಮಗಳಾಗಲಿವೆ. ಇಲ್ಲಿನ ಕೃಷಿ, ಮೀನುಗಾರಿಕೆ ಜೊತೆ ಪರಿಸರದ ಮೇಲೆಯೂ ನದಿ ತಿರುವು ಯೋಜನೆ ಪರಿಣಾಮ ಬೀರಲಿದೆ.
ಅಘನಾಶಿನಿ ನದಿಯ ನೀರನ್ನು ಸಿದ್ದಾಪುರದ ಮೂಲಕ ವಾಣಿ ವಿಲಾಸ ಸರೋವರಕ್ಕೆ 35 ಟಿಎಂಸಿ ನೀರು ಸರಬರಾಜು ಮಾಡಲು ಸರ್ಕಾರ 134ಕಿಮೀ ಕಾಲುವೆ ನಿರ್ಮಿಸಲು ಉದ್ದೇಶಿಸಿದೆ. ಈ ಯೋಜನೆಯಿಂದ 250 ಜಾತಿಯ ಮೀನುಗಳು, 120 ಜಾತಿಯ ಪಕ್ಷಿಗಳು ಹಾಗೂ 13 ಜಾತಿಯ ಮ್ಯಾಂಗ್ರೋ ಸಂತತಿ ಕುಸಿತವಾಗಲಿದೆ. ಈ ಯೋಜನೆ ಜಾರಿ ಆದಲ್ಲಿ ನದಿ ನೀರಿನ ಪ್ರಮಾಣ ಕಡಿಮೆ ಆಗಲಿದ್ದು, ಸಮುದ್ರದ ಉಪ್ಪು ನೀರು ನದಿ ಆವರಿಸುವ ಆತಂಕ ಎದುರಾಗಲಿದೆ. ಜೊತೆಗೆ ಮೀನಿನ ಸಂತತಿ ನಾಶ, ಜೀವ ವೈವಿಧ್ಯ ಉತ್ಪಾದನೆಯ ಕುಸಿತ, ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಅಭಾವ ಆಗುವ ಲಕ್ಷಣಗಳು ಹೆಚ್ಚಿದೆ.
ಅಘನಾಶಿನಿ ನದಿಯ ಮೇಲೆ ಅವಲಂಬಿತವಾಗಿರುವ ಕರಾವಳಿ ಭಾಗದ ಸುಮಾರು 20 ಸಾವಿರ ಕುಟುಂಬಗಳ ಮೇಲೆ ವೃತ್ತಿ, ಕೃಷಿ ಮತ್ತು ಆರ್ಥಿಕ ಅವಲಂಬಿತರ ಮೇಲೆ ನೇರವಾಗಿ ಯೋಜನೆ ಪರಿಣಾಮ ಬೀರಲಿದೆ. ಮುಖ್ಯವಾಗಿ ಅಘನಾಶಿನಿ ನದಿ ಅಂಚಿನಲ್ಲಿ ಉತ್ಪತ್ತಿಯಾಗುತ್ತಿರುವ ಚಿಪ್ಪು ಮೀನು ನಶಿಸಲಿದೆ. ಅಘನಾಶಿನಿ ನದಿಯ ತೀರದಲ್ಲಿ ಸಹಸ್ರಾರು ಕುಟುಂಬಗಳು ನೈಸರ್ಗಿಕವಾಗಿ ಬೆಳೆಯುತ್ತಿರುವ ಚಿಪ್ಪು ಮೀನು ಬದುಕಿ ಜೀವನ ಕಟ್ಟಿಕೊಂಡಿದ್ದು, ಅವರ ಸ್ವಾವಲಂಭಿ ಬದುಕಿಗೆ ನಷ್ಟವಾಗಲಿದೆ.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಈ ವಿಷಯದ ಬಗ್ಗೆ ಸ್ಥಳ ಭೇಟಿ ನಡೆದಿ ಅಧ್ಯಯನ ಮಾಡಿದ್ದಾರೆ. ಕರಾವಳಿ ಭಾಗದ ನದಿ ಅವಲಂಬಿತ ಜನರ ಆಥೀಕ ಬಿಕ್ಕಟ್ಟಿಗೆ ಅಘನಾಶಿನಿ ನದಿ ಜೋಡಣೆ ಕಾರಣವಾಗುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಮಂಜುನಾಥ ಮರಾಠಿ ನಾಗೂರು, ಮುಜಾಫರ್ ಕರೀಂ ಸಾಬ ಸಂತೆಗುಳಿ, ಸೀತಾರಾಮ ನಾಯ್ಕ ಬುಗರಿಬೈಲ್, ಶಂಕರ್ ಗೌಡ ಕಂದವಳ್ಳಿ, ಕಾಸಿಂ ಅಬುಬಕರ್ ಸಂತೆಗುಳಿ, ದಿವಾಕರ್ ನಾಯ್ಕ ಸಂತೆಗುಳಿ, ಕುರಿಯಾ ಕೋಸ್ತಾ ಹಳವಳ್ಳಿ, ಬೀರ ಗೋವಿಂದ ಗೌಡ ಬಡಾಳ, ಹಿಲ್ಲರ್ ಪಿಂಟೊ ದೂಳ್‌ಹೊಳೆ ಅವರು ಸ್ಥಳ ಭೇಟಿ ಮಾಡಿ, ವಿವರ ದಾಖಲಿಸಿದ್ದಾರೆ.