`ಹಾವೇರಿಯಲ್ಲಿ ಕಾರ್ಖಾನೆ ಹೊಂದಿರುವ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಅವರು ತಮ್ಮ ಉದ್ದಿಮೆ ರಕ್ಷಣೆಗಾಗಿ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆಗೆ ಆಸಕ್ತಿವಹಿಸಿದ್ದಾರೆ’ ಎಂದು ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಈ ಯೋಜನೆಗೆ ಶಿವರಾಮ ಹೆಬ್ಬಾರ್ ಅವರ ಬೆಂಬಲವಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಶಾಸಕ ಶಿವರಾಮ ಹೆಬ್ಬಾರರ ದ್ವಿಮುಖ ನೀತಿ ಕರಾವಳಿ ಉತ್ಸವದ ಅವಧಿಯಲ್ಲಿ ಡಿ ಕೆ ಶಿವಕುಮಾರ ಅವರ ಮಾತಿನ ಮೂಲಕ ಬಹಿರಂಗವಾಗಿದೆ’ ಎಂದು ಹೇಳಿದ್ದಾರೆ. `ತಮ್ಮ ಉದ್ಯಮದ ರಕ್ಷಣೆಗಾಗಿ ಹಾವೇರಿ ಮೇಲೆ ಹೆಬ್ಬಾರ ಅವರಿಗೆ ವಿಶೇಷ ಪ್ರೀತಿ ಇರುವಂತೆ ಕಾಣುತ್ತಿದೆ. ಆದರೆ, ಯೋಜನೆಗಾಗಿ ತ್ಯಾಗ ಮಾಡಿ ಸರ್ಕಾರ ನೀಡುವ ಪರಿಹಾರ ತೆಗೆದುಕೊಂಡು ಸುಮ್ಮನಾಗಲು ಜಿಲ್ಲೆಯ ಜನತೆ ಭಿಕ್ಷುಕರಲ್ಲ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ. `ನದಿ ತಿರುವು ವಿಷಯವಾಗಿ ತಮ್ಮ ನಿಲುವು ಏನು ಎಂಬುದನ್ನು ಶಾಸಕರು ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
`ಬಿಜೆಪಿ ಸರ್ಕಾರದಲ್ಲಿ ಕಾಗೇರಿ ವಿಧಾನಸಭಾಧ್ಯಕ್ಷರಾಗಿದ್ದರು ಎಂಬುದು ಸತ್ಯ. ಆದರೆ, ಆ ಅವಧಿಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರು ಉಸ್ತುವಾರಿ ಸಚಿವರಾಗಿದ್ದರು. ಆಗಲೇ, ಹೆಬ್ಬಾರ್ ಅವರು ವಿರೋಧದ ಧ್ವನಿ ಎತ್ತಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಶಿವರಾಮ ಹೆಬ್ಬಾರ್ ಅವರು ಪಕ್ಷ ಬದಲಾಯಿಸಿದ ಮಾತ್ರಕ್ಕೆ ನೈತಿಕ ಹೊಣೆ ಬದಲಾಗಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ. `ಬೇಡ್ತಿ-ವರದಾ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಂಸದರ ನೇತೃತ್ವದಲ್ಲಿ ಕೇಂದ್ರದ ಬಳಿ ನಿಯೋಗದೊಂದಿಗೆ ಹೋಗಿ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ. ಅಗತ್ಯ ಬಿದ್ದಲ್ಲಿ ಪ್ರಧಾನ ಮಂತ್ರಿಗಳನ್ನೂ ಭೇಟಿ ಮಾಡಿ ಯೋಜನೆ ಕೈ ಬಿಡಲು ವಿನಂತಿಸಲಾಗುತ್ತದೆ’ ಎಂದು ಹರಿಪ್ರಕಾಶ ಕೋಣೆಮನೆ ಹೇಳಿದ್ದಾರೆ.