ಗ್ರಾಮ ಪಂಚಾಯತ ಕಾರ್ಯದರ್ಶಿ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂ ದುಡ್ಡಿರುವುದನ್ನು ಅರಿತ ಕಳ್ಳರು ಆ ಖಾತೆಗೆ ಕನ್ನ ಹಾಕಿದ್ದಾರೆ. ಭಟ್ಕಳದಲ್ಲಿ ಸರ್ಕಾರಿ ನೌಕರರಾಗಿರುವ ಮಂಜುನಾಥ ಶೆಟ್ಟಿಮನೆ ಅವರು ಬ್ಯಾಂಕ್ ಖಾತೆಯಲ್ಲಿದ್ದ 8 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ!
ಭಟ್ಕಳದ ಮುರುಡೇಶ್ವರ ಬಳಿಯ ಬೇಂಗ್ರೇ ಮಾವಿನತೋಳದ ಮಂಜುನಾಥ ಶೆಟ್ಟಿಮನೆ ಅವರು ಗ್ರಾಮ ಪಂಚಾಯತದಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಎಸ್ಬಿಐ ಬ್ಯಾಂಕಿನಲ್ಲಿ ಅವರು ಖಾತೆ ಹೊಂದಿದ್ದಾರೆ. 2025ರ ಡಿಸೆಂಬರ್ 24ರಂದು ಅವರ ಬ್ಯಾಂಕ್ ಖಾತೆಯನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿದ್ದಾರೆ. ಮೊದಲ ಸಲ 900ರೂಪಾಯಿಗಳಂತೆ ಎರಡು ಬಾರಿ ಹಣ ಕದ್ದಿದ್ದಾರೆ. 2700ರೂ ಹಣ ಕಡಿತವಾದ ಬಗ್ಗೆ ಅರಿತ ಮಂಜುನಾಥ ಶೆಟ್ಟಿಮನೆ ತಮ್ಮ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಡಿಸೆಂಬರ್ 26ರಂದು ನಿಷ್ಕ್ರಿಯಗೊಳಿಸಿದ್ದ ಬ್ಯಾಂಕ್ ಖಾತೆಯನ್ನು ಮತ್ತೆ ಚಾಲು ಸ್ಥಿತಿಗೆ ತಂದಿದ್ದಾರೆ. ಅದೇ ದಿನ ಸಂಜೆ ಅವರ ಅದೇ ಬ್ಯಾಂಕ್ ಖಾತೆಯಿಂದ 1.94 ಲಕ್ಷ ರೂ ಮಾಯವಾಗಿದೆ. ಅದಾದ ಕೆಲ ಸಮಯದ ನಂತರ ಮತ್ತೆ 1.95 ಲಕ್ಷ ರೂ ಕಡತವಾಗಿದೆ. ಮೂರನೇ ಬಾರಿ ಮತ್ತೆ 68 ಸಾವಿರ ರೂ ಕಳ್ಳತನವಾಗಿದೆ. ಆ ದಿನ ಒಟ್ಟು 457000ರೂ ನಾಪತ್ತೆ ಆಗಿದ್ದರಿಂದ ಮಂಜುನಾಥ ಶೆಟ್ಟಿಮನೆ ಅವರು ಆತಂಕಕ್ಕೆ ಒಳಗಾಗಿದ್ದಾರೆ.
ಅದಾದ ನಂತರ ಅವರ ಬ್ಯಾಂಕ್ ಖಾತೆಗೆ 8 ಲಕ್ಷ ರೂ ಜಮಾ ಆಗಿದ್ದು, ಆ ವೇಳೆಯಲ್ಲಿಯೂ ಕಳ್ಳರು ಕ್ರಮವಾಗಿ 185000ರೂ ಹಾಗೂ 158000ರೂ ಎಗರಿಸಿದ್ದಾರೆ. ಇದರಿಂದ ಮಂಜುನಾಥ ಶೆಟ್ಟಿಮನೆ ಅವರಿಗೆ ಒಟ್ಟಾರೆಯಾಗಿ 802,700ರೂ ನಷ್ಟವಾಗಿದೆ. ದುಷ್ಕರ್ಮಿಗಳು ಕಂಪ್ಯುಟರ್ ಸಾಧನ ಬಳಸಿ ಮಂಜುನಾಥ ಶೆಟ್ಟಿಮನೆ ಅವರ ಹಾಗೇ ಕಂಪ್ಯುಟರ್ ಮುಂದೆ ನಟಿಸಿ ಹಣ ದೋಚಿದ್ದಾರೆ. ಮಂಜುನಾಥ ಶೆಟ್ಟಿಮನೆ ಅವರ ಎಲೆಕ್ಟಾçನಿಕ್ ಸಹಿ ದುರುಪಯೋಗಪಡಿಸಿ ಹಣ ಕೊಳ್ಳೆಹೊಡೆದ ಅನುಮಾನಗಳಿವೆ.