ಭಟ್ಕಳದ ದುಬೈ ಮಾರ್ಕೇಟಿನಲ್ಲಿ ನಿಷೇಧಿತ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೂವಿನ ಚೌಕ ಸಮೀಪ ದಾಳಿ ನಡೆಸಿದ ಪೊಲೀಸರು ಇ-ಸಿಗರೇಟ್ ಜೊತೆ ಅದರ ಒಳಗೆ ತುಂಬುವ ನಿಕೋಟಿನ್’ನ್ನು ವಶಕ್ಕೆಪಡೆದಿದ್ದಾರೆ.
ಭಟ್ಕಳದ ಕಾರಗದ್ದೆಯ ಸಿದ್ದಿಕ್ ಅಬ್ದುಲ್ ರೆಹಮಾನ್ @ ಮಸ್ತಾನ್ ತಂದೆ ಸಿದ್ದಿಕ್ ಖಾದಿರ ಮೀರಾ (58) ಅವರು ಈ ಪ್ರದೇಶದಲ್ಲಿ ರಾಜಾರೋಷವಾಗಿ ಇ-ಸಿಗರೇಟ್ ಮಾರಾಟ ಮಾಡುತ್ತಿದ್ದರು. ಅದರ ಮಾರಾಟ ಅಪರಾಧ ಎಂದು ಅರಿವಿದ್ದರೂ ಆ ಬಗ್ಗೆ ಸಿದ್ದಿಕ್ ಅವರು ತಲೆಕೆಡಿಸಿಕೊಂಡಿರಲಿಲ್ಲ. ಜನವರಿ 1ರಂದು ರಾತ್ರಿ 10.3ಕ್ಕೆ ಪೊಲೀಸರು ಅವರ ಅಂಗಡಿ ಬಳಿ ತೆರಳಿದ್ದು, ನಿಷೇಧಿತ ವಸ್ತುಗಳನ್ನು ವಶಕ್ಕೆಪಡೆದರು.
76 ಸಾವಿರ ರೂ ಮೌಲ್ಯದ 38 ಎಲೆಕ್ಟ್ರಾನಿಕ್ ಸಿಗರೇಟಿನ ಜೊತೆ 62500 ರೂ ಮೌಲ್ಯದ ನಿಕೋಟಿನ್ ದೃವಗಳು ಅಲ್ಲಿ ಸಿಕ್ಕಿದವು. ಒಟ್ಟು 1,38,500 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತು ಮಾಡಿದರು. ಭಟ್ಕಳ ಪೋಲಿಸ್ ಉಪಾಧೀಕ್ಷಕ ಮಹೇಶ ಎಂ ಕೆ ಅವರಿಗೆ ಬಂದ ಮಾಹಿತಿ ಆಧಾರದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪಿಐ ದಿವಾಕರ ಪಿ ಎಂ ಅವರ ಜೊತೆ ಪಿಸೈ ನವೀನ ನಾಯ್ಕ ಮತ್ತು ಸಿಬ್ಬಂದಿ ಉದಯ ನಾಯ್ಕ, ದೀಪಕ ನಾಯ್ಕ, ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ರೇವಣಸಿದ್ದಪ್ಪ ಮಾಗಿ, ಜಗದೀಶ ನಾಯ್ಕ ಮತ್ತು ಸುರೇಶ ಮರಾಠಿ ಕಾರ್ಯಾಚರಣೆಯಲ್ಲಿದ್ದರು.